
ಹೇಗ್, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಉಗಾಂಡಾದ ಭಯಾನಕ ಸೇನಾಧಿಪತಿ ಹಾಗೂ ಲಾರ್ಡ್ಸ್ ರೆಸಿಸ್ಟೆನ್ಸ್ ಆರ್ಮಿ ಸಂಘಟನೆಯ ಮುಖ್ಯಸ್ಥ ಜೋಸೆಫ್ ಕೋನಿ ವಿರುದ್ಧದ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪಗಳನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅಧಿಕೃತವಾಗಿ ದೃಢಪಡಿಸಿದೆ.
ಕೊಲೆ, ಅತ್ಯಾಚಾರ, ಬಾಲಸೈನಿಕರ ಬಳಕೆ, ಲೈಂಗಿಕ ಗುಲಾಮಗಿರಿ ಮತ್ತು ಬಲವಂತದ ಗರ್ಭಧಾರಣೆ ಸೇರಿದಂತೆ ಒಟ್ಟು 39 ಗಂಭೀರ ಆರೋಪಗಳನ್ನು ನ್ಯಾಯಾಲಯವು ಅವರ ವಿರುದ್ಧ ಹೊರಿಸಿದೆ.
2002 ರಿಂದ 2005ರ ಅವಧಿಯಲ್ಲಿ ನಡೆದ ಅಪರಾಧಗಳ ಕುರಿತು ಈ ವಿಚಾರಣೆ ನಡೆಯಲಿದೆ. 2005ರಲ್ಲಿ ಐಸಿಸಿ ಕೋನಿ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಆದರೆ ಅವರು ಎರಡು ದಶಕಗಳಿಂದ ತಲೆಮರೆಸಿಕೊಂಡು ಪರಾರಿಯಾಗಿರುವುದರಿಂದ ಇಂದಿಗೂ ನ್ಯಾಯಾಲಯದ ಅತ್ಯಂತ ಹಿರಿಯ ಪರಾರಿಯಾಗಿರುವ ಆರೋಪಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ.
ವಿಚಾರಣೆಯನ್ನು ಮುಂದೂಡುವಂತೆ ಕೋನಿ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜೋಸೆಫ್ ಕೋನಿ ನಾಗರಿಕರ ಮೇಲಿನ ಹತ್ಯೆ, ಚಿತ್ರಹಿಂಸೆ, ಆಸ್ತಿ ದೋಚುವುದು, ಮಹಿಳೆಯರು ಹಾಗೂ ಮಕ್ಕಳ ಅಪಹರಣಕ್ಕೆ ಆದೇಶಿಸಿದ್ದಾರೆ ಎಂಬ ನಂಬಿಕೆಗೆ ಸಾಕಷ್ಟು ಆಧಾರಗಳಿವೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಕೋನಿ ತಮ್ಮ ಇಬ್ಬರು ಬಲವಂತದ ಹೆಂಡತಿಯರ ಕುರಿತಾದ 10 ಅಪರಾಧಗಳ ಆರೋಪಗಳನ್ನು ವೈಯಕ್ತಿಕವಾಗಿ ಎದುರಿಸುತ್ತಿದ್ದಾರೆ. ಇದರಲ್ಲಿ ಗುಲಾಮಗಿರಿ, ಬಲವಂತದ ಮದುವೆ, ಬಲವಂತದ ಗರ್ಭಧಾರಣೆ, ಚಿತ್ರಹಿಂಸೆ ಮತ್ತು ಲಿಂಗಾಧಾರಿತ ನಿಂದನೆ ಸೇರಿವೆ ಎಂದು ನ್ಯಾಯಾಲಯ ತಿಳಿಸಿದೆ.
ಅಭಿಯೋಜಕರು ಈ ತೀರ್ಪನ್ನು ಸ್ವಾಗತಿಸಿ, ಜೋಸೆಫ್ ಕೋನಿ ವಿರುದ್ಧದ ಕಾನೂನು ಕ್ರಮ ಪ್ರಾರಂಭಿಸಲು ಇದು ಮಹತ್ವದ ಹೆಜ್ಜೆ. ಅವರು ಬಂಧಿತರಾದ ತಕ್ಷಣ ನ್ಯಾಯ ಕ್ರಮ ಮುಂದುವರಿಯುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.
1980ರ ದಶಕದ ಅಂತ್ಯದ ಭಾಗದಲ್ಲಿ ಜೋಸೆಫ್ ಕೋನಿ ಉಗಾಂಡಾ ಸರ್ಕಾರವನ್ನು ಉರುಳಿಸಲು ಲಾರ್ಡ್ಸ್ ರೆಸಿಸ್ಟೆನ್ಸ್ ಆರ್ಮಿ ಸಂಘಟನೆಯನ್ನು ಸ್ಥಾಪಿಸಿದ್ದರು. ವಿಶ್ವಸಂಸ್ಥೆಯ ಅಂದಾಜು ಪ್ರಕಾರ, ಅವರ ನಾಯಕತ್ವದಲ್ಲಿ ಉಗಾಂಡಾದಲ್ಲಿ ಸುಮಾರು 1 ಲಕ್ಷ ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದರು. ಇಂದಿಗೆ LRA ಬಹುತೇಕ ನಾಶವಾಗಿದ್ದರೂ, ಕೋನಿ ಇನ್ನೂ ಮುಕ್ತವಾಗಿಯೇ ತಿರುಗಾಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa