
ನವದೆಹಲಿ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ತಮ್ಮ ಸಂದೇಶವನ್ನು ಹಂಚಿಕೊಂಡು, “ಈ ಹಾಡು ಭಾರತದ ಸಾಮೂಹಿಕ ಪ್ರಜ್ಞೆಯ ಸಂಕೇತವಾಗಿದೆ; ಇದು ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕನ್ನು ನೀಡಿದ ಗೀತೆ” ಎಂದು ಹೇಳಿದರು.
ಖರ್ಗೆ ಅವರು ತಮ್ಮ ಸಂದೇಶದಲ್ಲಿ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ ವಂದೇ ಮಾತರಂ ಹಾಡು ಭಾರತ ಮಾತೆಯ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ, ದೇಶದ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸುತ್ತದೆ ಎಂದು ಹೇಳಿದರು.
1896ರಲ್ಲಿ ಕಲ್ಕತ್ತಾದ ಕಾಂಗ್ರೆಸ್ ಅಧಿವೇಶನದಲ್ಲಿ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರು ವಂದೇ ಮಾತರಂ ಅನ್ನು ಮೊದಲು ಸಾರ್ವಜನಿಕವಾಗಿ ಹಾಡಿದರು. ಆ ಕ್ಷಣದಿಂದಲೇ ಇದು ಸ್ವಾತಂತ್ರ್ಯ ಚಳವಳಿಗೆ ನವಚೇತನವನ್ನು ತಂದಿತು ಎಂದಿದ್ದಾರೆ.
ಬಂಗಾಳ ವಿಭಜನೆಯ ಸಮಯದಿಂದ ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತಗಳವರೆಗೆ ವಂದೇ ಮಾತರಂ ಹಾಡು ದೇಶದ ಮೂಲೆಮೂಲೆಗೂ ಪ್ರತಿಧ್ವನಿಸಿತು ಎಂದು ಖರ್ಗೆ ನೆನಪಿಸಿದರು.
ಲಾಲಾ ಲಜಪತ್ ರಾಯ್ ಅವರ ಪ್ರಕಟಣೆಗಳಿಂದ ಭಿಕಾಜಿ ಕಾಮಾ ಅವರ ಧ್ವಜದವರೆಗೆ ಹಾಗೂ ರಾಮಪ್ರಸಾದ್ ಬಿಸ್ಮಿಲ್ ಅವರ ಕ್ರಾಂತಿ ಗೀತಾಂಜಲಿವರೆಗೆ ಎಲ್ಲೆಡೆ ವಂದೇ ಮಾತರಂ ಸ್ವಾತಂತ್ರ್ಯದ ಘೋಷಣೆಯಾಯಿತು.
ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಮತ್ತು ಜನ-ಗಣ-ಮನ ಎರಡನ್ನೂ ಹೆಮ್ಮೆಯಿಂದ ಹಾಡುತ್ತದೆ. ಈ ಹಾಡುಗಳು ಭಾರತದ ಏಕತೆ, ವೈವಿಧ್ಯತೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಪ್ರತಿನಿಧಿಸುತ್ತವೆ ಎಂದು ಖರ್ಗೆ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa