
ಹೊಸಪೇಟೆ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ವಾಹನಗಳು ಹೊರಸೂಸುವ ಹೊಗೆ ಸೇರಿ ವಿಷಕಾರಕ ಅನಿಲ ಸೇವನೆಯಿಂದ ಅನಾರೋಗ್ಯ ಪ್ರಮಾಣ ಹೆಚ್ಚಳ. ವಾಯುಮಾಲಿನ್ಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೇ ಮಾನವ ಸಂಕುಲ ವಿನಾಶ ಖಚಿತ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ್ ಅವರು ಹೇಳಿದ್ದಾರೆ.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಯುಮಾಲಿನ್ಯ ನಿಯಂತ್ರಣ ಕುರಿತು ಸಾರಿಗೆ ಇಲಾಖೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ವಾಹನಗಳ ವಾಯುಮಾಲಿನ್ಯದಿಂದಾಗುವ ದುಷ್ಪಾರಿಣಾಮಗಳನ್ನು ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಇದಾಗಿದೆ. ವಿಷಕಾರಕ ಅನಿಲ ಸೇವನೆಯಿಂದಾಗಿ ಅಸ್ತಮಾ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗಲಿದೆ. ಚಾಲಕರಿಗೆ ಏಕಾಗ್ರತೆ ಭಂಗ, ಮಕ್ಕಳಲ್ಲಿ ಮಾನಸಿಕ ದುರ್ಬಲತೆ ಬುದ್ಧಿಮಾಂದ್ಯತೆ, ಮೆದುಳೀನ ಕಾರ್ಯಚಾರಣೆ ಕುಂಠಿತ, ದೃಷ್ಟಿ ಮಂದಾಗುವಿಕೆ, ಗರ್ಭಿಣಿ ಸ್ತ್ರೀಯರಿಗೆ ಗರ್ಭಸ್ರಾವ ಹಾಗೂ ಹುಟ್ಟುವ ಮಕ್ಕಳ ಆರೋಗಕ್ಕೆ ಹಾನಿ. ಸಸ್ಯಗಳ ಬೆಳವಣಿಗೆಯಲ್ಲಿ ಕುಂಠಿತ. ದಟ್ಟವಾದ ಹೊಗೆಯಿಂದ ಚಳಿಗಾಲದಲ್ಲಿ ಅಗೋಚರತೆ ಹೆಚ್ಚಾಗಲಿದೆ. ಇದರಿಂದಾಗಿ ವಾಹನಗಳ ಅಫಘಾತ ಪ್ರಕರಣಗಳು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ವಾಹನಗಳನ್ನು ಸುಸ್ಥಿತಿಯಲ್ಲಿ ಇರಿಸದೇ ಇದ್ದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 1500 ರೂಗಳು, ನಾಲ್ಕು ಚಕ್ರದ ವಾಹನಗಳಿಗೆ 3000 ರೂಗಳು ಮತ್ತು ಭಾರಿವಾಹನಗಳಿಗೆ 3000 ರೂ. ಗಳಷ್ಟು ದಂಡ ವಿಧಿಸಲಾಗುವುದು ಎಂದರು.
ಪರಿಸರವಾದಿ ಪ್ರಭಾಕರ್ ಮಾತನಾಡಿ, ಪರಿಸರದ ಮಹತ್ವವನ್ನು ಇಂದಿನ ಯುವಪೀಳಿಗೆ ಹಾಗೂ ಮಕ್ಕಳು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಗಿಡ ಮರಗಳನ್ನು ನಾಶ ಮಾಡಿ ಅರಣ್ಯಗಳನ್ನು ಕಳೆದುಕೊಂಡಿದ್ದೇವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಹೆಚ್ಚಿನ ಅಕ್ಸಿಜನ್ ಅವಶ್ಯಕತೆಯಿದೆ. ಭವಿಷ್ಯದಲ್ಲಿ ಅರಣ್ಯ ನಾಶದ ಪ್ರತಿಫಲವಾಗಿ ಆಕ್ಸಿಜನ್ ಬ್ಯಾಗ್ ಬಳಕೆ ಮಾಡುವ ಪರಿಸ್ಥಿತಿ ಬಂದೊಗಲಿದೆ. ನಮ್ಮ ಭಾಗದಲ್ಲಿ ಗಣಿಗಾರಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಸ್ಥಳೀಯ ಉದ್ಯಮಿದಾರರು ಕುಡಿಯುವ ನೀರಿನ ಮಾಲಿನ್ಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರು ಮನೆಯ ಸುತ್ತಮುತ್ತಲಿನ ವಾತಾವರಣ ಶುದ್ದವಾಗಿರಿಸಬೇಕು. ಪ್ರತಿ ವ್ಯಕ್ತಿ 5 ಮರದ ಸಸಿಗಳನ್ನು ನೆಡುವುದರ ಜತೆಗೆ ಸಂರಕ್ಷಣೆ ಮಾಡಬೇಕು.
ಅರಣ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವಷ್ಟೇ ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಾಣ ನಮ್ಮ ಆದ್ಯ ಕರ್ತವ್ಯವಾಗಲಿ. ಸಾರಿಗೆ ಇಲಾಖೆಯಿಂದ ಹಣ್ಣಿನ ಮರಗಳನ್ನು ನೆಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ಡಿ.ಹುಲುಗಪ್ಪ ಮಾತನಾಡಿ, ಕಲಬೆರಕೆ ಪೆಟ್ರೋಲ್ ಮತ್ತು ಡೀಸೆಲ್‍ನ್ನು ಬಳಕೆ ಹಾಗೂ ವಾಹನ ಮಾಲೀಕರು ಕಡಿಮೆ ಬೆಲೆಯ ಕಳಪೆ ಇಂಜಿನ್ ಆಯಿಲ್‍ಗಳನ್ನು ಬಳಸುವುದು, ಸೈಲೆನ್ಸರ್‍ಗಳನ್ನು ಟ್ಯಾಂಪರ್ ಮಾಡುವುದು. ಏರ್‍ಫೀಲ್ಟರ್ ಮತ್ತು ಸ್ಪಾರ್ಕ್ ಪ್ಲಗ್‍ಗಲನ್ನು ಬದಲಾಯಿಸದೇ ಇರುವುದು. ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕೆಂಪು ದೀಪ ಇದ್ದಾಗ ವಾಹನಗಳ ಇಂಜಿನ ಬಂದ್ ಮಾಡದಿರುವುದು. ನಿಗದಿಗಿಂತ ಅಧಿಕ ಭಾರದ ಸಾಗಣೆ, ಇಂಜಿನ್ ಅಯಿಲ್‍ನ್ನು ನಿಗದಿತ ಅವಧಿಯಲ್ಲಿ ಬದಲಾಯಿಸದೇ ಇರುವುದರಿಂದ ಹೆಚ್ಚು ವಾಯುಮಾಲಿನ್ಯ ಸೃಷ್ಟಿಯಾಗಲಿದೆ. ವಾಹನಗಳ ಮಾಲೀಕರು ವಾಹನಗಳ ನಿರ್ವಹಣೆಗೆ ಕಾಳಜಿ ವಹಿಸಿದರೇ ಪರಿಸರದಲ್ಲಿನ ಮಾಲಿನ್ಯ ನಿಯಂತ್ರಿಸಲು ಸಾಧ್ಯ ಎಂದರು.
ಈ ವೇಳೆ ಮೋಟಾರು ಹಿರಿಯ ನಿರೀಕ್ಷಕರು ಮಂಜುನಾಥ ಪ್ರಸಾದ, ಮೋಟಾರು ನಿರೀಕ್ಷಕ ಮೊಹಮ್ಮದ್ ಶರೀಫ್ ಶೇಖ್‍ಜಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಪ್ರಾದೇಶಿಕ ಸಾರಿಗೆ ಸಿಬ್ಬಂದಿ ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್