ಹುಬ್ಬಳ್ಳಿ ಚಂದ್ರಮೌಳೇಶ್ವರ ದೇವಸ್ಥಾನ ಅಭಿವೃದ್ಧಿಗೆ ಕ್ರಮ : ರುದ್ರಪ್ಪ ಲಮಾಣಿ
ಹುಬ್ಬಳ್ಳಿ, 06 ನವೆಂಬರ್ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ಉಣಕಲ್ಲಿನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಮುಂದಿನ ಬಜೆಟ್‍ನಲ್ಲಿ ಸರ್ಕಾರದಿಂದ ಅಗತ್ಯ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದ
Visit


ಹುಬ್ಬಳ್ಳಿ, 06 ನವೆಂಬರ್ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ಉಣಕಲ್ಲಿನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಮುಂದಿನ ಬಜೆಟ್‍ನಲ್ಲಿ ಸರ್ಕಾರದಿಂದ ಅಗತ್ಯ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಕರ್ನಾಟಕ ವಿಧಾನ ಸಭೆಯ ಉಪಸಭಾಧ್ಯಕ್ಷ ಹಾಗೂ ವಿಧಾನ ಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ಹೇಳಿದರು.

ಉಣಕಲ್ಲ ಪ್ರದೇಶದ ಶ್ರೀ ಚಂದ್ರಮೌಳೆಶ್ವರ ದೇವಸ್ಥಾನಕ್ಕೆ ಕರ್ನಾಟಕ ವಿಧಾನ ಸಭೆ ಅರ್ಜಿ ಸಮಿತಿ ಸದಸ್ಯರು ಭೇಟಿ ನೀಡಿದ ಬಳಿಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಅರ್ಜಿಗಳ ವಿಚಾರಣೆ ಜರುಗಿಸಿ, ಪತ್ರಿಕಾಗೋಷ್ಠಿ ಜರುಗಿಸಿ ಮಾತನಾಡಿದ ಅವರು,

ದೇವಸ್ಥಾನದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುತ್ತದೆ. ಈಗಾಗಲೇ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಸೂಕ್ತ ರೀತಿಯಲ್ಲಿ ಸ್ಥಳಾಂತರ ಮಾಡಬೇಕು. ಅಲ್ಲದೇ ಅವರಿಗೆ ಬೇರೆ ಕಡೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಅಲ್ಲದೇ ಕೆಲವರು ಉತ್ತಮ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರ ಮನವೊಲಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಈ ಮೊದಲೇ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲಾಗಿದೆ. ನಿವಾಸಿಗಳು ಸಹ ಹೊಸ ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗದ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಪುರಾತತ್ವ ಇಲಾಖೆ ಅಧಿಕಾರಿಗಳು ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ಹೀಗಾಗಿ ಬೇರೆ ಕಡೆಯಲ್ಲಿ ಜಾಗ ಕೊಟ್ಟರೆ ಇಲ್ಲಿಂದ ಸ್ಥಳಾಂತರವಾಗುತ್ತೇವೆ ಎಂದು ಕೆಲವರು ಹೇಳಿದ್ದಾರೆ. ಈ ವಿಷಯವನ್ನು ಸಮಿತಿಯ ಮುಂದಿಟ್ಟು, ಪರಿಹಾರ ಕಂಡುಕೊಳ್ಳಬೇಕು. ದೇವಸ್ಥಾನ ಅಭಿವೃದ್ಧಿ ಕುರಿತು ಯೋಜನೆ ರೂಪಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಎಲ್ಲ ವಿಷಯಗಳ ಬಗ್ಗೆ ಸುಲಲಿತವಾಗಿ ಚರ್ಚೆ ನಡೆಸಲಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಿರಪೆಕ್ಷಣಾ ಪ್ರಮಾಣ ಪತ್ರ ನೀಡಲು ಒಪ್ಪಿದ್ದಾರೆ ಎಂದು ಅವರು ತಿಳಿಸಿದರು.

ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಚಂದ್ರಮೌಳೇಶ್ವರ ದೇವಸ್ಥಾನ ವೀಕ್ಷಿಸಲು ಆಗಮಿಸುತ್ತಾರೆ. ಇತ್ತೀಚೆಗೆ ಬಾಂಬೆ, ಪುಣೆ ನಗರಗಳಿಂದ ಸಹ ಪ್ರವಾಸಿಗರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಐತಿಹಾಸಿಕ ಸ್ಥಳಕ್ಕೆ ಮುಕ್ತಿ ದೊರೆಯಬೇಕು ಎಂಬ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ. ಉದ್ಯಾನವನ, ಶೌಚಾಲಯ, 4 ರಸ್ತೆಗಳನ್ನು ಕೂಡಿಸುವುದು ಸೇರಿದಂತೆ ಒಟ್ಟಾರೆಯಾಗಿ ದೇವಸ್ಥಾನದ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಈ ದೇವಸ್ಥಾನ ಪುರಾತತ್ವ ಇಲಾಖೆ ಅಡಿಯಲ್ಲಿದ್ದು, ಮುಜರಾಯಿ ಇಲಾಖೆಯ ಸಿ ವರ್ಗಕ್ಕೆ ಸೇರಿದೆ. ದೇವಸ್ಥಾನಕ್ಕೆ ಯಾವುದೇ ಆದಾಯವಿರುವುದಿಲ್ಲ. ದೇವಸ್ಥಾನ ಗೂಗಲ್‍ನಲ್ಲಿ ಮಾತ್ರ ನಮಗೆ ಕಾಣಸಿಗುತ್ತದೆ. ದೇವಸ್ಥಾನಕ್ಕೆ ಭೇಟಿ ನೀಡಲು ಸರಿಯಾದ ದಾರಿ ಕೂಡ ಇಲ್ಲವಾಗಿದೆ. ದೇವಸ್ಥಾನದ ಅಭಿವೃದ್ಧಿ ಕುರಿತು ಶಾಸಕರು ಸಮಿತಿಗೆ ತಿಳಿಸಿದರು. ಅದರಂತೆ ಇಂದು ಸಮಿತಿಯು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದೆ ಎಂದು ಅವರು ಹೇಳಿದರು.

ದೇವಸ್ಥಾನ ಅಭಿವೃದ್ಧಿಗೆ ಸರ್ಕಾರದ ಸಹಾಯ ಅವಶ್ಯಕವಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ, ಕಟ್ಟಡ ನಿರ್ಮಾಣ, ಇತರೆ ಕಾಮಗಾರಿಗೆ ಸುಮಾರು ರೂ.25 ಕೋಟಿ ಅನುದಾನವನ್ನು ನೀಡುವಂತೆ ಮನವಿ ಮಾಡಲಾಗುವುದು. ಸುಮಾರು 56 ರಿಂದ 58 ಮನೆಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande