ಕಬ್ಬು ಬೆಳೆಗಾರರ ಬೇಡಿಕೆ ಚರ್ಚೆಗೆ ನಾಳೆ ಸಭೆ : ಸಿದ್ದರಾಮಯ್ಯ
ಕಬ್ಬು ಕಾರ್ಖಾನೆ ಮಾಲೀಕರು ಹಾಗೂ ರೈತರ ಸಭೆ ಕರೆದ ಮುಖ್ಯಮಂತ್ರಿ
Cm


ಬೆಂಗಳೂರು, 06 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಮೂರು ಗಂಟೆಗಳ ಚರ್ಚೆ ನಡೆಯಿತು. ಕಬ್ಬು ಬೆಲೆಯ ಕುರಿತು ರೈತರ ಬೇಡಿಕೆ, ಕಾರ್ಖಾನೆಗಳ ಪಾವತಿ ವಿಳಂಬ ಮತ್ತು ಕೇಂದ್ರದ ನೀತಿಗಳ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಬ್ಬಿಗೆ ಎಫ್.ಆರ್.ಪಿ ನಿಗದಿ ಮಾಡುವುದು ರಾಜ್ಯ ಸರ್ಕಾರದ ಕೆಲಸವಲ್ಲ. ಅದು ಕೇಂದ್ರ ಸರ್ಕಾರದ ವ್ಯಾಪ್ತಿಯ ವಿಷಯ. ಕೇಂದ್ರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವೇ ಮೇ 6, 2025ರಂದು ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನಿಗದಿ ಮಾಡಿದೆ. ರಾಜ್ಯ ಸರ್ಕಾರದ ಕರ್ತವ್ಯ ರೈತರಿಗೆ ನಿಗದಿತ ಬೆಲೆ ದೊರೆಯುವಂತೆ ನೋಡಿಕೊಳ್ಳುವುದಾಗಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ಬಿ.ಜೆ.ಪಿ ಸರ್ಕಾರವೇ ಎಫ್ಆರ್ ಪಿ ನಿರ್ಧರಿಸಿದೆ. ರೈತರು ರಾಜ್ಯದ ಬಿ.ಜೆ.ಪಿ. ನಾಯಕರ ಮರಳು ಮಾತುಗಳಿಗೆ ಬಲಿಯಾಗಬಾರದು. ಕೇಂದ್ರದ ನೀತಿಗಳಿಂದಲೇ ರೈತರ ಬದುಕಿಗೆ ಸಂಕಷ್ಟ ಬಂದಿದೆ,” ಎಂದರು.

ಕಬ್ಬು ಬೆಳೆಗಾರರ ಪ್ರತಿಭಟನಾ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಜರಾಗದಿರುವುದರ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿ, ರೈತರ ಕೂಗಿಗೆ ಸ್ಪಂದಿಸುವ ಬದಲು ಅವರು ಮೌನವಾಗಿರುವುದು ಆಶ್ಚರ್ಯಕರ ಎಂದರು.

ರೈತರ ಬೇಡಿಕೆ ಕುರಿತ ಚರ್ಚೆಗಾಗಿ ನಾಳೆ ಸಭೆ

ನಾಳೆ ಬೆಳಿಗ್ಗೆ 11 ಗಂಟೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಹಾಗೂ ಮಧ್ಯಾಹ್ನ 1 ಗಂಟೆಗೆ ರೈತ ಮುಖಂಡರ ಸಭೆ ಕರೆಯಲಾಗಿದೆ. ಎರಡೂ ಕಡೆಯ ಮಾತು ಕೇಳಿ ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೇಂದ್ರಕ್ಕೆ ಪತ್ರ ಬರೆಯಲು ಸಂಪುಟ ನಿರ್ಧಾರ:

ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಕ್ಷಣ ಪತ್ರ ಬರೆದು, ರೈತರ ಬೇಡಿಕೆಗಳ ಕುರಿತು ಚರ್ಚಿಸಲು ಸಮಯ ಕೇಳಲು ತೀರ್ಮಾನಿಸಲಾಯಿತು. “ಸಕ್ಕರೆ ರಫ್ತು ನಿರ್ಬಂಧ, FRP ಪರಿಷ್ಕರಣೆ ಹಾಗೂ ರಿಕವರಿ ಪ್ರಮಾಣದ ಸಮಸ್ಯೆ ಕುರಿತು ಪ್ರಧಾನಿಯವರೊಂದಿಗೆ ನೇರವಾಗಿ ಚರ್ಚೆ ಮಾಡಲಾಗುವುದು,” ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯ ಸರ್ಕಾರವು ಡಿಜಿಟಲ್ ತೂಕ ಯಂತ್ರಗಳ ಅಳವಡಿಕೆ, ಪಾವತಿಗಳ ಪಾರದರ್ಶಕತೆ ಮತ್ತು ಕಟಾವು-ಸಾಗಣೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದೆ. ಕಳೆದ ಸಾಲಿನಲ್ಲಿ ರಾಜ್ಯದ ಕಾರ್ಖಾನೆಗಳು 522 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು, ರೈತರಿಗೆ ₹19,569 ಕೋಟಿ ಪಾವತಿಸಿವೆ ಎಂದು ವಿವರಿಸಿದರು.

ಕೇಂದ್ರದ ಅನ್ಯಾಯ ನೀತಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸಕ್ಕರೆ ರಫ್ತು ನಿಷೇಧದಿಂದ ಮಾರುಕಟ್ಟೆ ಕುಸಿತವಾಗಿದೆ, ಎಥನಾಲ್ ಖರೀದಿಯಲ್ಲಿ ತಾರತಮ್ಯ ತೋರಲಾಗಿದೆ. ನಮ್ಮ ಸರ್ಕಾರವು ಯಾವ ಬಿಕ್ಕಟ್ಟಿನಲ್ಲಾದರೂ ರೈತರ ಪರ ನಿಲ್ಲಲಿದೆ ಎಂದು ಸಿಎಂ ಭರವಸೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande