
ಹೊಸಪೇಟೆ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಹೊಸಪೇಟೆ ನಗರದ ಮ್ಯಾಸಕೇರಿ ನಿವಾಸಿಯೊಬ್ಬರು ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಹಾಗೂ ನಿರ್ಗತಿಕ ವಿಧವಾ ವೇತನ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿದ ಕೇವಲ ಒಂದು ತಾಸಿನಲ್ಲಿ ಮಂಜೂರಾತಿ ಅದೇಶ ಪತ್ರವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಫಲಾನುಭವಿಗೆ ವಿತರಿಸುವ ಮೂಲಕ ತ್ವರಿತ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫಲಾನುಭವಿಗೆ ಆದೇಶ ಪತ್ರಗಳನ್ನು ವಿತರಿಸಿ ಬಳಿಕ ಅವರು ಮಾತನಾಡಿ, ಹೊಸಪೇಟೆ ನಗರದ ಮ್ಯಾಸಕೇರಿ ನಿವಾಸಿ ಮರಡಿ ಶಾರದಮ್ಮ ಇವರ ಗಂಡ ಮರಡಿ ವೆಂಕಟೇಶ ಇದೇ ಅಕ್ಟೋಬರ್ 13 ರಂದು 45ನೇ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಮರಣ ಹೊಂದಿದ್ದು, ಇವರು ಅರ್ಜಿ ಸಲ್ಲಿಸಿದ ಒಂದು ತಾಸಿನಲ್ಲಿ ತಹಶೀಲ್ದಾರ ಎಂ.ಶೃತಿ ಅವರು ಮಂಜೂರಾತಿ ಆದೇಶ ಪತ್ರಗಳನ್ನು ಸಿದ್ದಪಡಿಸಿದ್ದಾರೆ.
ನೆರವು ಯೋಜನೆಯಡಿ 20 ಸಾವಿರ ರೂ ಹಾಗೂ ಪಿಂಚಣಿ ಯೋಜನೆಯಡಿ ಮಾಸಿಕ 800 ರೂಗಳನ್ನು ನೀಡಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯು ವಿಧವಾ ವೇತನ ಸೇರಿದಂತೆ ರಾಷ್ಟ್ರೀಯ ಕುಟುಂಬ ನೆರವು ಯೋಜನೆ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕು. ಮಧ್ಯವರ್ತಿಗಳನ್ನು ಅವಲಂಬಿಸದೇ ನೇರವಾಗಿ ಫಲಾನುಭವಿಗಳು ಆಯಾ ತಾಲೂಕಿನ ತಾಲೂಕು ಕಚೇರಿ ಹಾಗೂ ತಹಶೀಲ್ದಾರರನ್ನು ಭೇಟಿ ಮಾಡಿದರೇ ಶೀಘ್ರ ಸೇವೆ ಸಿಗಲಿದೆ ಎಂದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ತಹಶೀಲ್ದಾರ ಎಂ.ಶೃತಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್