


ಹುಲಿಗಿ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ನವೆಂಬರ್ ಮಾಸವನ್ನು ಅಂತಾರಾಷ್ಟ್ರೀಯ ದತ್ತು ಮಾಸಾಚರಣೆಯ ಅಂಗವಾಗಿ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದಲ್ಲಿ `ಮಮತೆಯ ತೊಟ್ಟಿಲು' ಅಳವಡಿಸಿ, ದತ್ತು ಪ್ರಕ್ರಿಯೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ರಾವ್ ಅವರು, ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಲು ಸರಕಾರವು ಕಾನೂನುಗಳಲ್ಲಿ ಹಲವಾರು ಅವಕಾಶಗಳನ್ನು ಕಲ್ಪಿಸಿದೆ. ಬೇಡವಾದ ಮಕ್ಕಳನ್ನು ಅಲ್ಲಿ-ಇಲ್ಲಿ ಬಿಸಾಡದೇ ಎಳೆಯ ಕಂದಮ್ಮಗಳನ್ನು ಮಮತೆಯ ತೊಟ್ಟಿಲಲ್ಲಿ ಹಾಕಿ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡುವ ಉದ್ದೇಶದಿಂದ ಹುಲಿಗಿ ದೇವಸ್ಥಾನದಲ್ಲಿ ಮಮತೆಯ ತೊಟ್ಟಿಲನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ದತ್ತು ಕಾರ್ಯಕ್ರಮದ ಕುರಿತು ಮತ್ತು ಮಗುವಿನ ಬದುಕುವ ಹಕ್ಕಿನ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ದತ್ತು ಸಂಕಲ್ಪ ಸಂದೇಶವನ್ನು ಪಡೆಯಲಾಯಿತು.
ಕಾರ್ಯಕ್ರಮದಲ್ಲಿ ಆರಕ್ಷಕ ಉಪನಿರೀಕ್ಷಕರಾದ ಶಾರದಮ್ಮ, ಸಂಚಾರಿ ಪೊಲೀಸ್ ಸಿಬ್ಬಂದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಅಸಾಂಸ್ಥಿಕ) ಪ್ರಶಾಂತ ರೆಡ್ಡಿ ಹಾಗೂ ಸಮಾಜ ಕಾರ್ಯಕರ್ತರಾದ ಪ್ರತಿಭಾ ಕಾಶಿಮಠ, ಮಕ್ಕಳ ಸಹಾಯವಾಣಿ ಸಂಯೋಜಕರು, ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಎಲ್ಲ ಸಿಬ್ಬಂದಿ, ಸಾವಿರಾರು ಸಂಖ್ಯೆ ಭಕ್ತ ಸಮೂಹದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್