
ಕೊಪ್ಪಳ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಹತ್ತಾರು ವರ್ಷಗಳಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸಲು ಆಗ್ರಹಿಸಿ ಗುರುವಾರ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರಿಗೆ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ, ಹಲವು ವರ್ಷಗಳಿಂದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅನೇಕರ ವಯೋಮಿತಿ ಮೀರಿದೆ. ಇನ್ನೂ ಹಲವರ ವಯೋಮಿತಿ ಮೀರುತ್ತಿದೆ. ಆದ್ದರಿಂದ ಬರುವ ದಿನಗಳಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಮಾಡುವ ಬದಲು ಸೇವಾ ಹಿರಿತನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವಂತೆ, ಉಳಿದಂತೆ ಎಲ್ಲ ಅತಿಥಿ ಉಪನ್ಯಾಸಕರ ಸೇವೆಯನ್ನು ಪ್ರತಿ ವರ್ಷ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರಿಗೆ ವರ್ಷದ ಹನ್ನೇರಡು ತಿಂಗಳು ಗೌರವಧನ ನೀಡಬೇಕು. ಈ ಮೊದಲು ಬೇಡಿಕೆ ಈಡೇರಿಸುವಂತೆ ಹಲವು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಈಗಾಗಲೇ ಕೌನ್ಸೆಲಿಂಗ್‌ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡವರನ್ನು ಪ್ರಥಮ ಆದ್ಯತೆ ಮೇರೆಗೆ ಸೇವೆಗೆ ಪರಿಗಣಿಸಬೇಕು. ಸೇವಾ ನಿವೃತ್ತಿ ಹೊಂದಿದ ಅತಿಥಿ ಉಪನ್ಯಾಸಕರ ಇಡುಗಂಟು ಹಣವನ್ನು ಕೂಡಲೇ ಮಂಜೂರು ಮಾಡುವಂತೆ ಅವರು ಒತ್ತಾಯಿಸಿದರು.
ಈ ವೇಳೆ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ವೀರಣ್ಣ ಸಜ್ಜನರ, ಡಾ.ಸಣ್ಣದೇವೇಂದ್ರಸ್ವಾಮಿ, ಡಾ.ಪ್ರಕಾಶ ಬಳ್ಳಾರಿ, ಡಾ.ತುಕಾರಾಂ ನಾಯ್ಕ, ಡಾ.ಶಿವಬಸಪ್ಪ ಮಸ್ಕಿ, ಡಾ.ಮಹಾಂತೇಶ ನೆಲಾಗಣಿ, ಬಸವರಾಜ ಶಿಬಾ, ರಾಮಪ್ರಸಾದ ಟಿಕಾರೆ, ಬಸವರಾಜ ಕರುಗಲ್, ವಿಜಯಕುಮಾರ ತೋಟದ, ಗೀತಾ ಬನ್ನಿಕೊಪ್ಪ, ಗಿರಿಜಾ, ಉಷಾ, ಅಕ್ಕಮಹಾದೇವಿ ಸೇರಿದಂತೆ ಹಲವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್