
ಬೆಂಗಳೂರು, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯುಎಎಸ್) ಜಿಕೆವಿಕೆ ಆವರಣದಲ್ಲಿ ಗುರುವಾರ 11ನೇ ಭಾರತೀಯ ಹಾರ್ಟಿಕಲ್ಚರ್ ಕಾಂಗ್ರೆಸ್ ಸಮಾವೇಶಕ್ಕೆ ಚಾಲನೆ ದೊರೆಯಿತು. ಕಾರ್ಯಕ್ರಮವನ್ನು ಡಿಎಆರ್‌ಇ ಹಾಗೂ ಐಸಿಎಆರ್ ಮಾಜಿ ಮಹಾನಿರ್ದೇಶಕರಾದ ಡಾ. ಆರ್.ಎಸ್. ಪಾರೋಡಾ,ಉದ್ಘಾಟಿಸಿದರು. ಡಾ. ಎಂ.ಎಲ್. ಜಾಟ್, ಡಿಎಆರ್‌ಇ ಕಾರ್ಯದರ್ಶಿ ಹಾಗೂ ಐಸಿಎಆರ್ ಮಹಾನಿರ್ದೇಶಕರು, ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಪಾರೋಡಾ “ತೋಟಗಾರಿಕೆ ವಲಯವು ದೇಶದ ಪೌಷ್ಠಿಕ ಭದ್ರತೆಯ ಕೇಂದ್ರೀಯ ಶಕ್ತಿ. ಕಳೆದ ಎರಡು ದಶಕಗಳಲ್ಲಿ ಹಣ್ಣು ಮತ್ತು ತರಕಾರಿಗಳ ಉತ್ಪಾದನೆ ಧಾನ್ಯ ಉತ್ಪಾದನೆಯನ್ನು ಮೀರಿದೆ. ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ರೈತರ ಆದಾಯವನ್ನು ಹೆಚ್ಚಿಸಲು ಕಟಿಬದ್ಧರಾಗಬೇಕು ಎಂದರು.
ಅಧ್ಯಕ್ಷೀಯ ಭಾಷಣದಲ್ಲಿ ಮಸತನಾಡಿದ ಡಾ. ಜಾಟ್ “ಪೌಷ್ಠಿಕಾಂಶಯುತ ಮತ್ತು ಸಾಂಪ್ರದಾಯಿಕ ಬೆಳೆಗಳ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಜೈವಿಕ ಕೃಷಿ ಮತ್ತು ಮಣ್ಣಿನ ಆರೋಗ್ಯ ಕಾಪಾಡುವ ಬಯೋ ಆಧಾರಿತ ವಿಧಾನಗಳನ್ನು ಉತ್ತೇಜಿಸಲು ಸರ್ಕಾರ, ವಿಜ್ಞಾನಿಗಳು ಮತ್ತು ಕೈಗಾರಿಕೆಗಳು ಸಹಕರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಾರ್ಟಿಕಲ್ಚರ್ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದವರಿಗೆ ಐಎಹೆಚ್‌ಎಸ್ ಪ್ರಶಸ್ತಿಗಳು ಪ್ರದಾನ ಮಾಡಲಾಯಿತು. ಐಸಿಎಆರ್–ಐಐಎಚ್‌ಆರ್ ಸಂಸ್ಥೆ ಹೊಸ ತಳಿ “ಅರ್ಕ ವೀರರಾಘವನ್” (ಗುಲಾಬಿ) ಮತ್ತು “ಅರ್ಕ ಅರಿನಾ” (ಚೈನಾ ಅಸ್ಟರ್) ಬಿಡುಗಡೆ ಮಾಡಲಾಯಿತು.
ಇದೇ ವೇಳೆ ಉತ್ತರ ಪ್ರದೇಶ ಸರ್ಕಾರ ಮತ್ತು ಐಐಎಚ್‌ಆರ್ ನಡುವೆ ಡ್ರ್ಯಾಗನ್ ಫ್ರೂಟ್ ಬೆಳೆ ಅಭಿವೃದ್ಧಿ ಹಾಗೂ ತಾಂತ್ರಿಕ ಸಹಕಾರ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa