
ಕೊಪ್ಪಳ, 05 ನವೆಂಬರ್ (ಹಿ.ಸ.)
ಆ್ಯಂಕರ್ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಾನೂನು ಪದವಿಧರರಿಗೆ ತರಬೇತಿ ಭತ್ಯೆ ನೀಡುವ ಉದ್ದೇಶದಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಗೆ ಸೇರಿದ ಪ್ರವರ್ಗ–1, 2ಎ, 3ಎ ಹಾಗೂ 3ಬಿ ಜನಾಂಗದ ಕಾನೂನು ಪದವಿ ಪಡೆದ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿ ಸ್ವೀಕಾರದ ನಿಗದಿತ ದಿನಾಂಕಕ್ಕೆ ಮುಂಚಿನ 2 ವರ್ಷಗಳೊಳಗೆ ಕಾನೂನು ಪದವಿಯಲ್ಲಿ ಉತ್ತೀರ್ಣರಾಗಿದ್ದು, ಬಾರ್ ಕೌನ್ಸಿಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಬೇಕು. ವಯೋಮಿತಿಯಂತೆ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮತ್ತು ಇತರೆ ಹಿಂದುಳಿದ ವರ್ಗದವರಿಗೆ 38 ವರ್ಷ ನಿಗದಿಯಾಗಿದೆ. ಪ್ರವರ್ಗ-1ರ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ. 3.50 ಲಕ್ಷಕ್ಕೆ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳ ಆದಾಯ ರೂ.2.50 ಲಕ್ಷಕ್ಕೆ ಮೀರಿರಬಾರದು.
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಸಂಕೀರ್ಣ ಕಟ್ಟಡ, ಕೊಪ್ಪಳ ಇವರಿಂದ ಪಡೆದು, ಅಗತ್ಯ ದಾಖಲೆಗಳ ದೃಢೀಕೃತ ನಕಲುಗಳೊಂದಿಗೆ ಡಿಸೆಂಬರ್ 5ರ ಸಂಜೆ 5.30 ಗಂಟೆಯೊಳಗಾಗಿ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್