
ಮಿರ್ಜಾಪುರ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ನಡೆದ ಭೀಕರ ರೈಲು ಅಪಘಾತದಲ್ಲಿ ಆರು ಮಹಿಳೆಯರು ಸೇರಿದಂತೆ ಎಂಟು ಯಾತ್ರಿಕರು ದುರ್ಮರಣ ಹೊಂದಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದಾರುಣ ಘಟನೆ ಬೆಳಿಗ್ಗೆ 9:30ರ ಸುಮಾರಿಗೆ ಚುನಾರ್ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ರಲ್ಲಿ ಸಂಭವಿಸಿದೆ. ಕಾರ್ತಿಕ ಪೂರ್ಣಿಮಾ ಹಬ್ಬದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಭಾರಿ ಜನಸಂದಣಿ ಇತ್ತು. ಚೋಪನ್‌ನಿಂದ ಬಂದ ಪ್ಯಾಸೆಂಜರ್ ರೈಲು ನಿಲ್ಲುತ್ತಿದ್ದಾಗ, ಕೆಲ ಭಕ್ತರು ಪ್ಲಾಟ್‌ಫಾರ್ಮ್ ಮೂಲಕ ಹೊರಬರುವ ಬದಲು ಹಳಿಗಳಿಂದ ಇಳಿಯಲು ಯತ್ನಿಸಿದರು. ಅದೇ ವೇಳೆ ವೇಗವಾಗಿ ಬಂದ ನೇತಾಜಿ ಎಕ್ಸ್‌ಪ್ರೆಸ್ ರೈಲು ಆ ಹಳಿಯಲ್ಲೇ ಹಾದುಹೋಗಿ ಹಲವರನ್ನು ಡಿಕ್ಕಿ ಹೊಡೆದಿದೆ.
ಘಟನೆಯ ನಂತರದ ದೃಶ್ಯಗಳು ಹೃದಯವಿದ್ರಾವಕವಾಗಿದ್ದು, ಹಳಿಯ ಮೇಲೆ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಸೇರಿದಂತೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ದಾಖಲಿಸಲಾಯಿತು. ಮೃತರಲ್ಲಿ ಹೆಚ್ಚಿನವರು ಕಾರ್ತಿಕ ಪೂರ್ಣಿಮಾ ಸ್ನಾನಕ್ಕಾಗಿ ಗಂಗಾಘಾಟ್‌ಗೆ ತೆರಳುತ್ತಿದ್ದ ಭಕ್ತರು ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಹಿರಿಯ ರೈಲ್ವೆ ಹಾಗೂ ಜಿಲ್ಲಾ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಪ್ರಾರಂಭಿಸಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ದುರಂತದ ಬಗ್ಗೆ ಆಳವಾದ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮೃತರ ಕುಟುಂಬಗಳಿಗೆ ಅಗತ್ಯ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa