
ವಿಜಯಪುರ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಬ್ರಿಗೇಡಿಯರ್ ಜಯದೀಪ್ ಮುಖರ್ಜಿ ಕಮಾಂಡೆಂಟ್ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್(ಎಂಎಲ್‌ಐಆರ್‌ಸಿ) ಬೆಳಗಾವಿಯವರು ವಿಜಯಪುರ ನಗರದಲ್ಲಿರುವ ಸೈನಿಕ ಶಾಲೆಗೆ ಭೇಟಿ ನೀಡಿದರು.
ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ಅವರು, ಮರಾಠಾ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್(MLIRC)ನ ಬ್ರಿಗೇಡಿಯರ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಶಾಲೆಯ ಭೇಟಿಯ ಸಮಯದಲ್ಲಿ ಬ್ರಿಗೇಡಿಯರ್ ಮುಖರ್ಜಿ ಅವರು ಶಾಲೆಯ ಎಲ್ಲಾ ಸೌಕರ್ಯಗಳನ್ನು ವೀಕ್ಷಿಸಿ, ಶಾಲಾ ಸಿಬ್ಬಂದಿ ಮತ್ತು ಕೆಡೆಟ್‌ಗಳೊಂದಿಗೆ ಸಂವಾದ ನಡೆಸಿದರು.
ಅವರ ಗೌರವಾರ್ಥವಾಗಿ ವಿಶೇಷ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೈನಿಕ ಶಾಲೆಗಳಿಂದ ಹೊರಹೊಮ್ಮುವ ಯುವ ಮಿಲಿಟರಿ ಅಧಿಕಾರಿಗಳ ವಿಸ್ತಾರವಾದ ಮೂಲಸೌಕರ್ಯ ಮತ್ತು ಕೆಲಸದ ನೀತಿಯನ್ನು ಶ್ಲಾಘಿಸಿದರು.
ದೇಶದಲ್ಲಿ ಶಿಸ್ತು, ನಾಯಕತ್ವ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣದ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಅತ್ಯುತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು, ಭಾರತೀಯ ಸಶಸ್ತ್ರ ಸೇನಾ ಪಡೆಗಳನ್ನು ಸೇರುವಂತೆ ಅವರು ಕೆಡೆಟ್‌ಗಳಿಗೆ ಕರೆ ನೀಡಿದರು.
ಶಾಲೆಯಲ್ಲಿನ ಅತ್ಯುನ್ನತ ಶಿಕ್ಷಣ, ವಿಶೇಷ ತರಬೇತಿ ಮತ್ತು ಗುಣಾತ್ಮಕ ಆಡಳಿತವು ಶಾಲೆಯ ನಿರಂತರ ಸಾಧನೆಯ ಶಿಖರವಾಗಿದೆ ಎಂದು ಕಮಾಂಡೆಂಟ್ ರವರು ಶ್ಲಾಘಿಸಿದರು.
ಈ ವಿಶೇಷ ಸಭೆಯಲ್ಲಿ ಬ್ರಿಗೇಡಿಯರ್ ಜಯದೀಪ್ ಮುಖರ್ಜಿ ಅವರು 2025 ರ ಜಿಲ್ಲಾ ಮಟ್ಟದ ‘ಗ್ರಾಮೀಣ ಐಟಿ ರಸಪ್ರಶ್ನೆ’ಯಲ್ಲಿ ವಿಜೇತರಾದ ಶಾಲೆಯ ಕೆಡೆಟ್ ಗಳನ್ನು ಅಭಿನಂದಿಸಿದರು ಮತ್ತು ಅವರಿಗೆ ಪ್ರಮಾಣ ಪತ್ರವನ್ನು ಪ್ರಧಾನ ಮಾಡಿದರು.
ಅವರ ಈ ಭೇಟಿಯ ಸಮಯದಲ್ಲಿ ಎಂಎಲ್‌ಐಆರ್‌ಸಿ ಬೆಳಗಾವಿಯ ಅಧಿಕಾರಿಗಳು, ಶಾಲೆಯ ಹಿರಿಯ ಮಾಸ್ಟರ್ ರೇವಣಕುಮಾರ ದೇಸಾಯಿ, ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿವರ್ಗದವರು, ಜೆ.ಸಿ.ಓ. ಗಳು, ಎನ್.ಸಿ.ಸಿ. ಸಿಬ್ಬಂದಿವರ್ಗ ಮತ್ತು ಕೆಡೆಟ್‌ಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande