
ಬಳ್ಳಾರಿ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ದತ್ತು ಮಾಸಾಚರಣೆ-2025 ಅಂಗವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ವಿಶೇಷ ದತ್ತು ಕೇಂದ್ರದ ವತಿಯಿಂದ ‘Adoption of Children having special needs’ ಎಂಬ ಈ ಬಾರಿಯ ಘೋಷವಾಕ್ಯದಡಿ ಜಿಲ್ಲೆಯಲ್ಲಿ ನವೆಂಬರ್ ಮಾಹೆಯಾದ್ಯಂತ ವಿಶೇಷಚೇತನ ಮಕ್ಕಳ ದತ್ತು ಪ್ರಕ್ರಿಯೆ ಮಾಸಾಚರಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಬದ್ಧ ದತ್ತು ಪ್ರಕ್ರಿಯೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ ಅವರು ತಿಳಿಸಿದ್ದಾರೆ.
ಅಕ್ರಮವಾಗಿ ದತ್ತು ಪಡೆಯುವುದು ಸಮಸ್ಯೆಗೆ ಆಹ್ವಾನಿಸಿ ಕದ್ದ ಮಕ್ಕಳು, ನರ್ಸಿಂಗ್ ಹೋಮ್ ಗಳಿಂದ ಮಕ್ಕಳನ್ನು ದತ್ತು ಪಡೆಯುವುದು ಅಕ್ರಮ ಕಾನೂನಿನಡಿ ಅಪರಾಧ ಮತ್ತು ಶಿಕ್ಷೆ ಇದೆ. ಹಾಗಾಗಿ ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಲು ಅವಕಾಶವಿದೆ. ಇದರಿಂದ ದತ್ತು ಮಕ್ಕಳಿಗೂ ಹಾಗೂ ದತ್ತು ಪಡೆದವರಿಗೂ ಕಾನೂನುಬದ್ದವಾಗಿ ಹಲವು ಹಕ್ಕುಗಳು ದಕ್ಕುತ್ತವೆ. ಜೈವಿಕವಾಗಿ ಪಡೆದ ಮಕ್ಕಳಿಗೆ ಸಿಗುವ ಎಲ್ಲಾ ಹಕ್ಕುಗಳನ್ನು ದತ್ತು ಮಕ್ಕಳು ಪಡೆಯಲು ಅರ್ಹರಿರುತ್ತಾರೆ ಎಂದು ಹೇಳಿದ್ದಾರೆ.
*58 ಮಕ್ಕಳು ದತ್ತು:*
ಕಾನೂನು ಬದ್ಧ ದತ್ತು ಪ್ರಕ್ರಿಯೆ ಭಾಗವಾಗಿ ಜಿಲ್ಲೆಯಲ್ಲಿ 2012 ರಿಂದ ಆಕ್ಟೋಬರ್-2025 ಅಂತ್ಯದವರೆಗೆ 21 ಗಂಡು, 37 ಹೆಣ್ಣು ಮಕ್ಕಳನ್ನು ಸೇರಿದಂತೆ ಒಟ್ಟು 58 ಮಕ್ಕಳನ್ನು ದತ್ತು ನೀಡಲಾಗಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆ-08, ಅಂತರ ಜಿಲ್ಲೆ-29, ಅಂತರ್ ರಾಜ್ಯ-19, ವಿದೇಶ-2 ಮಕ್ಕಳನ್ನು ದತ್ತು ನೀಡಲಾಗಿದೆ ಹಾಗೂ ಜಿಲ್ಲೆಯಲ್ಲಿ ಪೋಷಕತ್ವ ಯೋಜನೆಯಡಿ 06 ರಿಂದ 18 ವರ್ಷದೊಳಗಿ 05 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ತಾತ್ಕಾಲಿಕವಾಗಿ ದತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.
*ಬೇಡವಾದ ಶಿಶು ಇದ್ದಲ್ಲಿ ಕರೆ ಮಾಡಿ:*
ಬೇಡವಾದ ನವಜಾತ ಶಿಶುಗಳನ್ನು ಕಸದ ತೊಟ್ಟಿಗೆ ಎಸೆಯುವುದು ಅಮಾನವೀಯ ಕೃತ್ಯ. ತಮಗೆ ಜನಿಸಿದ ನವಜಾತ ಶಿಶು, ಅನಾಥ, ಪರಿತ್ಯಕ್ತ ಮಗುವು ತಮಗೆ ಬೇಡವಾದಲ್ಲಿ ಮಕ್ಕಳ ಸಹಾಯಣಿಗೆ ಕರೆ ಮಾಡಿ ಮಾಹಿತಿ ನೀಡಿದರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ಸ್ವೀಕರಿಸಿ, ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ದಾಖಲು ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ನವಜಾತ ಮಗುವಿನ ತಾಯಿ/ಪೋಷಕರಿಗೆ ಯಾವುದೇ ವಿಚಾರಣೆಗೆ ಒಳಪಡಿಸಲಾಗುವದಿಲ್ಲ. ಈ ಬಗ್ಗೆ ಸಾರ್ವಜನಿಕರು ಸಹ ಯಾವುದೇ ಭಯ ಆತಂಕ ಪಡುವಂತಿಲ್ಲ.
ಹಾಗಾಗಿ ಸಾರ್ವಜನಿಕರು ಬೇಡವಾದ ಮಕ್ಕಳನ್ನು ಯಾವುದೇ ಕಾರಣಕ್ಕೂ ಮಕ್ಕಳನ್ನು ಕಸದ ಬುಟ್ಟಿಯಲ್ಲಿ, ರಸ್ತೆ ಬದಿಯಲ್ಲಿ, ತಿಪ್ಪೆ ಗುಂಡಿಯಲ್ಲಿ ಹಾಕುವುದರ ಮೂಲಕ ಮಕ್ಕಳ ಸಾವಿಗೆ ಕಾರಣರಾಗಬಾರದು.
“ಮಕ್ಕಳ ಮಾರಾಟ ಅಪರಾಧ” ಮಕ್ಕಳನ್ನು ಮಾರುವವರಿಗೆ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015 ಸೆಕ್ಷನ್ 81 ರನ್ವಯ 5 ವರ್ಷಗಳ ಸೆರೆಮನೆ ವಾಸದೊಂದಿಗೆ ರೂ.1 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ ಹಾಗೂ ಅಪರಾಧದಲ್ಲಿ ಆಸ್ಪತ್ರೆಯವರು ಭಾಗಿಯಾಗಿದ್ದರೆ ಶಿಕ್ಷೆಯ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಣೆಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಾರ್ವಿಜನಿಕರು ಯಾವುದೇ ಭಯ, ಆತಂಕವಿಲ್ಲದೇ ನಗರದ ಕಂಟೋನ್ ಮೆಂಟ್ ಪ್ರದೇಶದ ಶಾಂತಿಧಾಮ ಆವರಣದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ ಅಥವಾ ದೂ.08392-241373, ಮಕ್ಕಳ ಸಹಾಯವಾಣಿ-1098 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭ್ರದಾದೇವಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್