
ವಿಜಯಪುರ, 03 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದ ಪ್ರಗತಿಪರ ರೈತ ಸಿದ್ರಾಮೇಶ್ವರಗೌಡ ಬಿರಾದಾರ ತಮ್ಮ ತೋಟದಲ್ಲಿ ಬೆಳೆದ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇಂದು ಸೋಮವಾರ ನಗರದಲ್ಲಿ ಸಚಿವರ ಗೃಹಕಚೇರಿಗೆ ಆಗಮಿಸಿದ ಅವರು, ತಮ್ಮ ಒಂದು ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮೂಲಕ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣು ಬೆಳೆಯುತ್ತಿರುವುದಾಗಿ ತಿಳಿಸಿದರು. ಅಲ್ಲದೇ, ತಾವು ಬೆಳೆದ ಪೇರಲ ಹಣ್ಣಿನ ಉಡುಗೊರೆ ನೀಡಿದರು.
ಗುಜರಾತಿನಿಂದ ಈ ವಿಶೇಷ ತಳಿಯ ಬೀಜ ತರಿಸಿ ಹಣ್ಣು ಬೆಳೆದಿರುವುದಾಗಿ ತಿಳಿಸಿದ ಅವರು ಸಚಿವರು ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಾಯವಾಗಿದೆ. ಹೆಚ್ಚಿನ ನೀರು ಅಗ್ಯವಾಗಿರುವ ಈ ತಳಿ ಪೇರಲ ಬೆಳೆಯಲು ನೀರಾವರಿ ಯೋಜನೆಗಳು ಪ್ರಮುಖ ಕಾರಣವಾಗಿವೆ. ವರ್ಷಕ್ಕೆ ಎರಡು ಬಾರಿ ಈ ಹಣ್ಣನ್ನು ಬೆಳೆಯಬಹುದಾಗಿದ್ದು, ವಾರ್ಷಿಕವಾಗಿ ರೂ. 7 ರಿಂದ 8 ಲಕ್ಷ ಆದಾಯ ಗಳಿಸಬಹುದು ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ ಅವರು, ರೈತರ ಸಾರ್ಥಕ ಯಶೋಗಾಥೆ ಕೇಳಿ ಸಂತಸವಾಗಿದೆ. ತೋಟಗಾರಿಕೆ ಮತ್ತಷ್ಟು ಯಶಸ್ವಿಯಾಗಲಿ. ಇಂಥ ನೂತನ ಪ್ರಯತ್ನಗಳು ನಮ್ಮ ಜಿಲ್ಲೆಯ ಕೃಷಿ, ತೋಟಗಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ- ಬಾಗಲಕೋಟೆ ಕೆ. ಎಂ. ಎಫ್ ನಿರ್ದೇಶಕ ಸಿದಗೊಂಡ ರುದ್ರಗೌಡರ,, ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗುರುಪಾದಗೌಡ ದಾಶ್ಯಾಳ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande