
ಅಂಕೋಲಾ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಕೇಣಿಯಲ್ಲಿ ಜೆಎಸ್‌ಡಬ್ಲ್ಯೂ ಕಂಪನಿಯ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕೇಣಿ ಬಂದರು ವಿರೋಧಿ ಹೋರಾಟ ಸಮಿತಿ ಇಂದು ಅಂಕೋಲ ಬಂದ್‌ಗೆ ಕರೆ ನೀಡಿದ್ದು, ವ್ಯಾಪಾರಿಗಳು ಹಾಗೂ ಸಂಘಟನೆಗಳ ಸಂಪೂರ್ಣ ಬೆಂಬಲದೊಂದಿಗೆ ಬಂದ್ ಯಶಸ್ವಿಯಾಗಿದೆ.
ಬೆಳಗ್ಗೆಯಿಂದಲೇ ಅಂಕೋಲ ಪಟ್ಟಣದ ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿ, ಸಾರಿಗೆ ಮತ್ತು ಸಾಮಾನ್ಯ ಚಟುವಟಿಕೆಗಳು ಸ್ಥಗಿತಗೊಂಡವು. ಹೋರಾಟ ಸಮಿತಿಯ ಕಾರ್ಯಕರ್ತರು, ಮೀನುಗಾರರು ಹಾಗೂ ಸ್ಥಳೀಯರು ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜೆಎಸ್‌ಡಬ್ಲ್ಯೂ ಕಂಪನಿಯ ಅಣಕು ಶವಯಾತ್ರೆ ಕೈಗೊಂಡು ಜೈ ಹಿಂದ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಸರ್ಕಾರ ಮತ್ತು ಖಾಸಗಿ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಣಿ ಪ್ರದೇಶದಲ್ಲಿ ಬಂದರು ನಿರ್ಮಾಣದಿಂದ ಮೀನುಗಾರರ ಜೀವನಾಧಾರಕ್ಕೆ ಧಕ್ಕೆ ಉಂಟಾಗಲಿದೆ, ಬಂದರು ಯೋಜನೆ ವಿಸ್ತರಣೆಯಿಂದ ಸಮುದ್ರ ಜೀವನ, ಕರಾವಳಿ ಪರಿಸರ ಹಾಗೂ ಮೀನುಗಾರರ ಪರಂಪರೆಯ ನೆಲೆಗಳಿಗೆ ಹಾನಿ ಆಗಲಿದ್ದು ಸರಕಾರ ಕೂಡಲೇ ಈ ಯೋಜನೆ ಕೈ ಬಿಡಬೇಕು ಇಲ್ಲವಾದ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa