
ಕೊಪ್ಪಳ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಮೀನುಗಾರಿಕೆ ಇಲಾಖೆ ವತಿಯಿಂದ 2025-26 ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನವನ್ನು ಜಾರಿಗೊಳಿಸುವ ಸಲುವಾಗಿ ಕೊಪ್ಪಳ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳ ಆಯ್ದ ಗ್ರಾಮಗಳ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಪಂಗಡ ವರ್ಗದ ಮೀನುಗಾರರಿಂದ ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ ನೊಂದಿಗೆ ದ್ವಿಚಕ್ರ ವಾಹನ, ಐಸ್ ಬಾಕ್ಸ್ ನೊಂದಿಗೆ ತ್ರಿಚಕ್ರ ವಾಹನ ಮತ್ತು ಜೀವಂತ ಮೀನು ಮಾರಾಟ ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತಿದ್ದು, ಕೊಪ್ಪಳ ತಾಲೂಕಿನ ಹನುಮನಹಳ್ಳಿ ಮತ್ತು ಹಳೆಕುಂಟ, ಯಲಬುರ್ಗಾ ತಾಲೂಕಿನ ಸಾಲಭಾವಿ, ಪುಟಗಮರಿ, ಗುಂಟಮಡು, ಸಿಡ್ಲಭಾವಿ, ಎನ್ ಜರಕುಂಟಿ, ಬೀರಲದಿನ್ನಿ, ಚಿಕ್ಕವಂಕಲಕುಂಟಾ, ತಿಪ್ಪನಹಾಳ ಮತ್ತು ಕುಕನೂರು ತಾಲೂಕಿನ ಚಿಕ್ಕ ಬೀಡಿನಹಾಳ ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿರುತ್ತದೆ.
ಈ ಎಲ್ಲಾ ಗ್ರಾಮಗಳಿಂದ ಮಾತ್ರ ಬುಡಕಟ್ಟು ಸಮುದಾಯದ ಅಥವಾ ಪರಿಶಿಷ್ಟ ಪಂಗಡ ವರ್ಗದ ಅರ್ಹ ಮೀನುಗಾರರು ಮತ್ತು ಮೀನು ಕೃಷಿಕರು ಅರ್ಜಿ ಸಲ್ಲಿಸಬಹುದು. ಸರ್ಕಾರದ ಮಾರ್ಗಸೂಚಿ ಹಾಗೂ ಲಭ್ಯವಿರುವ ಅನುದಾನದ ಮೇರೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದರಿಂದ ಅರ್ಹ ಮೀನುಗಾರರು ಮತ್ತು ಮೀನುಕೃಷಿಕರು ಡಿಸೆಂಬರ್ 8 ರೊಳಗಾಗಿ ಕೊಪ್ಪಳ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗೆ ಯೋಜನೆಯ ನಿಯಮಾನುಸಾರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್