
ಬಳ್ಳಾರಿ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕೆಎ-34 ಆಫ್ ರೋಡ್ ಚಾಲೆಂಜ್ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 28, 29 ಮತ್ತು 30 ರಂದು ಮೂರು ದಿನಗಳಕಾಲ ನಾಲ್ಕು ಚಕ್ರ ವಾಹನಗಳ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಬಳ್ಳಾರಿಯ ಕೆಎ-34 ಆಫ್ ರೋಡ್ ಚಾಲೆಂಜ್ ಸಂಸ್ಥೆಯ ಅಧ್ಯಕ್ಷ ವಿಂದಿಯಾ ವರ್ಮಾ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನೆಕುಂಟೆ ಗ್ರಾಮದ ವ್ಯಾಪ್ತಿಯಲ್ಲಿ 4 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ. ಮಹಾರಾಷ್ಟ್ರದ ಸತಾರಾ, ಕರ್ನಾಟಕದ ವಿಜಯಪುರ, ಕಲಬುರ್ಗಿ, ಹಾಸನ, ನರಸಿಂಹರಾಜಪುರ, ಶಿವಮೊಗ್ಗ, ಬೆಂಗಳೂರು, ಮಡಿಕೇರಿ, ಸುರಪುರ, ಸೇರಿದಂತೆ ಕೇರಳ ರಾಜ್ಯ ನಾನಾ ಕಡೆಗಳ ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೆಎ-34 ಆಫ್ ರೋಡ್ ಚಾಲೆಂಜ್ ಸಂಸ್ಥೆಯ ಕಾರ್ಯದರ್ಶಿ ಕೆನಿತ್ ವರ್ಮಾ ಅವರು, ಬಳ್ಳಾರಿಯಲ್ಲಿ ಮೊದಲ ಬಾರಿಗೆ ನಾಲ್ಕು ಚಕ್ರ ವಾಹನಗಳ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕ್ರೀಡೆ 1 ರಿಂದ 1.5 ಕೀ.ಮೀ. ಇರಲಿದೆ. ಕೆ.ಎ.34 ಬಳ್ಳಾರಿ ಆಫ್ ರೋಡ್ 4*4 ಚಾಲೆಂಜ್ ಸೀಸನ್ -1 ಜೀಪ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 30 ಸಾವಿರ, 1 ರನ್ನರ್ ಅಪ್ 20 ಸಾವಿರ, 2ನೇ ರನ್ನರ್ ಅಪ್ 10 ಸಾವಿರ ಬಹುಮಾನ ನೀಡಲಾಗುವುದು ಎಂದರು.
ಜಾನೆಕುಂಟೆಯ ಬಯಲು ಪ್ರದೇಶದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧಾಳುಗಳಿಗೆ ಚಾಲನೆ ಪರವಾನಿಗೆ ಕಡ್ಡಾಯ. 18 ವರ್ಷ ಮೇಲ್ಪಟ್ಟವರು ಕ್ರೀಡೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 9035547674 ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಕೆಎ-34 ಆಫ್ ರೋಡ್ ಚಾಲೆಂಜ್ ಸಂಸ್ಥೆಯ ಖಜಾಂಚಿ ಡಾ. ರಾಹುಲ್ ಎಂ.ಪಿ., ಸಲಹೆಗಾರರಾದ ಸಂತೋಷ್ ಮಾರ್ಟಿನ್, ಹಿರಿಯ ಪತ್ರಕರ್ತರಾದ ಎಂ. ಅಹಿರಾಜ್, ವಿಜಯ ಆನಂದ್, ರಾಜೇಶ್, ದರ್ಶನ ಚೌದ್ರಿ, ಸಾಯಿ ಪ್ರಸಾದ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್