
ಗದಗ, 24 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂಬ ಒತ್ತಾಯದೊಂದಿಗೆ ನಡೆಯುತ್ತಿದ್ದ ಅನ್ನದಾತರ ಹೋರಾಟ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಕಳೆದ 10 ದಿನಗಳಿಂದ ಅಹೋರಾತ್ರಿ ಹೋರಾಟ ಮುಂದುವರಿದರೆ, ಇಂದು ರೈತರು ‘ದೀಡ ನಮಸ್ಕಾರ ಹಾಕುವ ಮೂಲಕ’ ತಮ್ಮ ಆಕ್ರೋಶವನ್ನ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಬೆಂಬಲ ಬೆಲೆ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಮಾತ್ರ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಆರಂಭಿಸಲು ವಿಳಂಬ ಮಾಡ್ತಿದೆ ಎಂಬ ಆರೋಪ ರೈತರದು. “ಬೆಂಬಲ ಬೆಲೆ ಕಾಗದದಲ್ಲಿ ಮಾತ್ರ ಇದ್ದರೆ ಅದು ರೈತರಿಗೆ ಯಾವ ಪ್ರಯೋಜನ?” ಎಂದು ಕಿಡಿ ಕಾರುತ್ತಿದ್ದಾರೆ.
ಇದೇ ವೇಳೆ, ಗೋಜನೂರು ಗ್ರಾಮಸ್ಥರು ಹೋರಾಟಕ್ಕೆ ಭಾರೀ ಬೆಂಬಲ ಘೋಷಿಸಿದ್ದು, ಸಾವಿರಾರು ರೈತರು ಒಂದೇ ವೇದಿಕೆಯಲ್ಲಿ ಕೂಡಿ, ಸರ್ಕಾರದ ನಿರ್ಲಕ್ಷ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವೇ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದ್ದರೂ, ಖರೀದಿ ಕೇಂದ್ರಗಳನ್ನು ಇನ್ನೂ ಪ್ರಾರಂಭಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. “ಗ್ರೀನ್ ಸಿಗ್ನಲ್ ಕೊಡೋದು ಬೇರೆ, ನೆಲಮಟ್ಟದಲ್ಲಿ ಖರೀದಿ ಪ್ರಾರಂಭ ಆಗೋದು ಬೇರೆ. ನಮ್ಮ ಜಿಲ್ಲೆಯ ಖರೀದಿ ಕೇಂದ್ರ ಯಾವಾಗ?” ಎಂಬ ಪ್ರಶ್ನೆ ಮಾಡಿದ್ದಾರೆ.
ದೀಡ ನಮಸ್ಕಾರ ಹಾಕುವ ಮೂಲಕ ನಡೆದಿರುವ ಈ ವಿನೂತನ ಪ್ರತಿಭಟನೆ ಲಕ್ಷ್ಮೇಶ್ವರದಲ್ಲಿ ಜನರ ಗಮನ ಸೆಳೆದಿದ್ದು, ಹೋರಾಟಗಾರರ ಧ್ವನಿಗೆ ಬೆಂಬಲವಾಗಿ ಹಲವಾರು ಸಂಘಟನೆಯ ಸಾಥ್ ನೀಡಿವೆ.
“ಖರೀದಿ ಕೇಂದ್ರ ಆರಂಭವಾದಾಗ ಮಾತ್ರ ಹೋರಾಟ ನಿಲ್ಲುತ್ತೆ. ಅದುವರೆಗೂ ನಾವು ಹೋರಾಟವನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗದಗ ಜಿಲ್ಲೆಯಲ್ಲೇ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಈಗ ಸ್ಪಂದಿಸುತ್ತದೆಯಾ? ಅಥವಾ ರೈತರ ಹೋರಾಟ ಇನ್ನೂ ತೀವ್ರವಾಗುತ್ತದೆಯಾ? ಎಂಬುದು ಕಾದು ನೋಡಬೇಕಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP