
ಪಣಜಿ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದ್ವಿತೀಯ ದಿನ “ನಾಳೆಯ ಸೃಜನಶೀಲ ಮನಸ್ಸುಗಳು” ಅಧಿವೇಶನದೊಂದಿಗೆ ಆರಂಭಗೊಂಡಿತು. ದೇಶದ ರಾಜ್ಯಗಳಿಂದ ಬಂದ ಸುಮಾರು 130 ಯುವ ಕಿರುಚಿತ್ರ ನಿರ್ಮಾಪಕರು ಈ ವೇದಿಕೆಯಲ್ಲಿ ತಮ್ಮ ಕಲ್ಪನೆ ಮತ್ತು ಪ್ರತಿಭೆ ಪ್ರದರ್ಶಿಸಲು ಸಂಭ್ರಮದಿಂದ ಭಾಗವಹಿಸಿದರು.
ಪಣಜಿಯ ಕಲಾ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್, ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಶಾರ್ಟ್ಸ್ ಟಿವಿ ಸಿಇಒ ಕಾರ್ಟರ್ ಪಿಲ್ಚರ್ ಉಪಸ್ಥಿತರಿದ್ದರು. ಆಯ್ಕೆಗೊಂಡ 125 ಕಿರುಚಿತ್ರ ನಿರ್ಮಾಪಕರ ಐದು ತಂಡಗಳು ಕೂಡ ಹಾಜರಾಗಿ ತಮ್ಮ ಪರಿಚಯ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುರುಗನ್, “ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಯುವ ಪ್ರತಿಭೆಗಳನ್ನು ಪೋಷಿಸಲು ಆರಂಭವಾದ ಈ ಯೋಜನೆಗೆ ಆರಂಭದ ದಿನಗಳಲ್ಲಿ ಕೆಲವೇ ಅರ್ಜಿಗಳು ಬಂದಿದ್ದರೂ, ಇಂದು ಯುವಜನರ ಸಾವಿರಕ್ಕೂ ಹೆಚ್ಚು ನಮೂದುಗಳು ಬಂದಿರುವುದು ಸಂತೋಷದ ವಿಷಯ,” ಎಂದು ಹೇಳಿದರು.
ಇವರು ಭಾರತೀಯ ಸಿನಿಮಾದ ಭವಿಷ್ಯದ ಅಡಿಪಾಯ ರೂಪಿಸುವ ತಲೆಮಾರು ಎಂದು ಅವರು ಹೇಳಿದ್ದಾರೆ. “ಭಾರತ ಕಥೆಗಳ ಭೂಮಿ, ಲಕ್ಷಾಂತರ ಕಥೆಗಳು ಇಲ್ಲಿ ಹರಡಿಕೊಂಡಿವೆ. ಇನ್ನೂ ನೂರುಕ್ಕೂ ಕಡಿಮೆ ಕಥೆಗಳು ಮಾತ್ರ ಸಿನಿಮಾದಲ್ಲಿ ಹೇಳಲ್ಪಟ್ಟಿವೆ. ಈ ಹೇಳದ ಕಥೆಗಳನ್ನು ಜಗತ್ತಿಗೆ ತಲುಪಿಸುವ ಹೊಣೆ ಇವರ ಮೇಲಿದೆ,” ಎಂದು ಹೇಳಿದರು.
ಶಾರ್ಟ್ಸ್ ಟಿವಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕಾರ್ಟರ್ ಪಿಲ್ಚರ್ ಮಾತನಾಡಿ, ಕಿರುಚಿತ್ರಗಳ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, “ಕಿರುಚಿತ್ರಗಳು ಸಿನಿಮಾದ ಭವಿಷ್ಯ” ಎಂದು ಅಭಿಪ್ರಾಯಪಟ್ಟರು. ಯುವ ಚಲನಚಿತ್ರ ನಿರ್ಮಾಪಕರ ಐದು ತಂಡಗಳಿಗೆ 48 ಗಂಟೆಗಳೊಳಗೆ ಕಿರುಚಿತ್ರ ನಿರ್ಮಿಸುವ ಸವಾಲು ನೀಡಲಾಗಿದ್ದು, ಅದರಲ್ಲಿ ಉತ್ತಮ ಕೃತಿಗೆ ಬಹುಮಾನ ಪ್ರದಾನಿಸಲಾಗುವುದು ಎಂದು ತಿಳಿಸಿದರು.
ಉದ್ಘಾಟನಾ ಅಧಿವೇಶನದ ನಂತರ ಯುವಕರ ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯನ್ನು ಚುರುಕುಗೊಳಿಸಲು ವಿಶೇಷ ಮಾಸ್ಟರ್‌ಕ್ಲಾಸ್ ಆಯೋಜಿಸಲಾಯಿತು. ಇದರ ನಂತರ ತಂಡಗಳು ತಮ್ಮ ಸಿದ್ಧತೆಯ ಕೆಲಸಕ್ಕೆ ತೊಡಗಿಕೊಂಡು, ಶೂಟಿಂಗ್ ಸ್ಥಳಗಳ ಆಯ್ಕೆ, ತಾಂತ್ರಿಕ ಸಿದ್ಧತೆ ಮತ್ತು ಕಥಾ ವಿನ್ಯಾಸದ ಚರ್ಚೆಗಳನ್ನು ಆರಂಭಿಸಿದವು. ಕೌಂಟ್‌ಡೌನ್ ಆರಂಭವಾದ ನಂತರ ತಮ್ಮ ಕಲ್ಪನೆಗಳಿಗೆ ಜೀವ ತುಂಬುವ ಕಿರುಚಿತ್ರಗಳ ಸಿದ್ಧತೆಯಲ್ಲಿ ಯುವಕರು ತೊಡಗಿಕೊಂಡರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa