
ಗಂಗಾವತಿ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಗಂಗಾವತಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನ ಕಟ್ಟಡಕ್ಕೆ ಅನುದಾನ ಕೇಳಲು ಹೋಗಿದ್ದ ಸಮಾಜದ ಪ್ರಮುಖರನ್ನು ಏಕ ವಚನದಲ್ಲಿ ನಿಂದಿಸಿ ಉದ್ದಟತನ ಮೆರೆದಿರುವ ಸಚಿವ ಶಿವರಾಜ್ ತಂಗಡಗಿಯವರು ಕೂಡಲೆ ಕ್ಷೆಮೆ ಕೇಳಬೇಕು ಎಂದು ಹಡಪದ ಅಪ್ಪಣ್ಣ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಸರಿಗಮ ಹನುಮಂತಪ್ಪ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ಎರಡ್ಮೂರು ವರ್ಷಗಳಿಂದ ನಮ್ಮ ಸಮಾಜಕ್ಕೆ ಸಮುದಾಯ ಭವನ ಹಾಗು ಹಾಸ್ಟೇಲ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮಾಜಿ ಸಚಿವ ಅನ್ಸಾರಿ ಹಾಗು ಮಾಜಿ ಶಾಸಕ ಪರಣ್ಣ ನೆರವಿನಿಂದಾಗಿ ಉಳ್ಳಿ ಡಗ್ಗಿಯಲ್ಲಿ ಸಿಎ ಸೈಟ್ ಖರೀದಿಸಿ, ಹಿಂದುಳಿದ ವರ್ಗಗಳ ನಿಗಮಕ್ಕೆ ಅನುದಾನಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು.
ಆದರೆ ದಾಖಲಾತಿಗಳು ಸರಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ ಸೂಕ್ತ ದಾಖಲಾತಿಗಳು ಸೇರಿದಂತೆ ಕಟ್ಟಡ ಪರವಾನೆಗೆ ಒಂದು ಲಕ್ಷರು ಹಣ ಕಟ್ಟಿ ನಗರಸಭೆಯಿಂದ ಬೆಂಗಳೂರಿಗೆ ಕಳುಹಿಸಲಾಯಿತು. ಕಟ್ಟಡ ಪರವಾನೆಗೆಯ ಅವಧಿ ಕೇವಲ ಒಂದೇ ವರ್ಷ ಇದ್ದು, ಒಂದು ವರ್ಷದಿಂದಲೂ ಸಚಿವ ಶಿವರಾಜ್ ತಂಗಡಗಿಯವರ ಮನೆ ಬಾಗಿಲಿಗೆ ಮತ್ತು ಬೆಂಗಳೂರಿಗೆ ಎಡತಾಕಿದರೂ ಬೇಡಿಕೆ ಈಡೇರಿಸದ ಕಾರಣ ಪರವಾನಿಗೆ ಲ್ಯಾಪ್ಸ್ ಆಗಿ, ಮತ್ತೆ ಒಂದು ವರ್ಷಕ್ಕೆ ಹಣ ಕಟ್ಟಿ ಪರವಾನೆಗೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಸಮಾಜದ ಸಮುದಾಯಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ಹತ್ತು ಲಕ್ಷ ರು. ಅನುದಾನ ನೀಡಿರಿ ಎಂದು ಹಲವು ಬಾರಿ ಸಚಿವ ತಂಗಡಗಿ ಅವರನ್ನು ಭೇಟಿ ಮಾಡಿ ಬೇಡಿಕೊಂಡರೂ ತುಚ್ಛವಾಗಿ ಕಾಣುತ್ತಾ ಅಹಾಂಕಾರದ ಮಾತುಗಳನ್ನಾಡುತ್ತಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ನಿರುಪಾದಿ ಕೆಸರಟ್ಟಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೌಲತ್ತಿನ – ಅಹಂಕಾರದ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಚಿವ ಸಂಪುಟದಿಂದ ಕೂಡಲೆ ಕೈ ಬಿಡಬೇಕು. ಹಲವು ಸಮಾಜಗಳನ್ನೊಳಗೊಂಡ ಹಿಂದುಳಿದ ವರ್ಗಗಳ ನಿಗಮಕ್ಕೆ ಸಮಾಜಮುಖಿ ಸಚಿವರನ್ನು ನೇಮಿಸಬೇಕು. ಧ್ವನಿ ಇಲ್ಲದ ಸಮಾಜಗಳಿಗೆ ಧ್ವನಿ ಆಗಬೇಕಾಗಿರುವ ಸಚಿವರು, ಸಣ್ಣ ಮಾತುಗಳನ್ನಾಡುವ ಮೂಲಕ ನಮ್ಮ ಸಮಾಜದ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶಿವಣ್ಣ ನೀಲಕಮಲ, ಸಹ ಕಾರ್ಯದರ್ಶಿ ಮಂಜುನಾಥ ಕನಕಗಿರಿ, ಉಪಾಧ್ಯಕ್ಷ ಭೀಮನಗೌಡ, ಖಜಾಂಚಿ ಶರಣ ಬಸವ ಎಸ್ಬಿ ನಗರ, ಯುವ ಘಟಕದ ಅಧ್ಯಕ್ಷ ವಿಕ್ರಮ್ ಪಾಟೀಲ್, ಪ್ರಮಖರಾದ ಬಸವರಾಜ್ ಎಸ್ಬಿ ನಗರ್, ವೀರಭದ್ರಗೌಡ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್