


ಕೊಪ್ಪಳ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕಾಯ್ದೆ-ಕಾನೂನುಗಳ ಮಕ್ಕಳ ಸುರಕ್ಷತೆಗಾಗಿದ್ದು, ಅವುಗಳನ್ನು ಅರಿತು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಸಮಾಜ ನಿರ್ಮಾತೃಗಳಾಗುವಂತೆ ಮಕ್ಕಳಿಗೆ ಸಿರವಾರದ ಡಾ. ಬಿ.ಆರ್ ಅಂಬೇಡ್ಕರ ವಸತಿ ಶಾಲೆಯ ಪ್ರಾಚಾರ್ಯ ಶೇಖರ ಅವರು ತಿಳಿಸಿದರು.
ಸಿರವಾರದ ಡಾ.ಬಿ.ಆರ್ ಅಂಬೇಡ್ಕರ ವಸತಿ ಶಾಲೆಯಲ್ಲಿ ಮಕ್ಕಳ ಮಾಸ ಹಾಗೂ ದತ್ತು ಮಾಸಾಚರಣೆ ಅಂಗವಾಗಿ ಜರುಗಿದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ(ಅಸಾಂಸ್ಥಿಕ) ಪ್ರಶಾಂತ ರಡ್ಡಿ ಅವರು ಮಾತನಾಡಿ, ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಲು ಸರಕಾರವು ಹಲವಾರು ಕಾನೂನು ಅವಕಾಶಗಳನ್ನು ಕಲ್ಪಿಸಿದೆ. ದತ್ತು ಪಡೆಯು ವ್ಯಕ್ತಿ ಅಥವಾ ಪೋಷಕರು (Mission VatsalyPortal) ಮಿಷನ್ ವಾತ್ಸಲ್ಯ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ ಎಂದರು.
ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದುಪಡಿ-2021ರ ಕಲಂ 81ರ ಅನ್ವಯ ಮಕ್ಕಳ ಮಾರಾಟ ಮಾಡುವುದು ಅಥವಾ ಕೊಳ್ಳುವುದು ಶಿಕ್ಷಾರ್ಹ ಅಪರಾಧ ಈ ಕೃತ್ಯಕ್ಕೆ 5 ರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ದಂಡ ತಪ್ಪಿದಲ್ಲ. ಈ ರೀತಿಯ ಕೃತ್ಯದಲ್ಲಿ ಶಾಮೀಲಾದ ಆಸ್ಪತ್ರೆ, ನರ್ಸಿಂಗ್ ಹೋಂ, ಹೆರಿಗೆ ಆಸ್ಪತ್ರೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 3 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜಕಾರ್ಯಕರ್ತೆ ಪ್ರತಿಭಾ ಕಾಶಿಮಠ ಅವರು ಮಾತನಾಡಿ, ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ -2006 ರನ್ನು ಜಾರಿಗೆ ತಂದಿರುತ್ತದೆ. ರಾಜ್ಯದಲ್ಲಿ ಬಾಲ್ಯವಿವಾಹ ಪ್ರಮಾಣಗಳು ಅಧಿಕವಾಗಿರುವುದನ್ನು ಗಮನಿಸಿ ಕರ್ನಾಟಕ ಸರ್ಕಾರವು ಮತ್ತಷ್ಟು ಪರಿಣಾಮಕಾರಿಯಾಗಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸಲು 2016ರಲ್ಲಿ ತಿದ್ದುಪಡಿಯನ್ನು ತಂದಿದ್ದು, ಅದರನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆಯನ್ನು ಮಾಡಿದವರಿಗೆ, ಭಾಗವಹಿಸಿದವರಿಗೆ ಮತ್ತು ಪ್ರೋತ್ಸಾಹಿಸಿದವರಿಗೆ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುವುದು ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದನ್ವಯ ಮಾರ್ಚ್ 3 2018 ರಿಂದ ಜರುಗುವ ಎಲ್ಲಾ ಬಾಲ್ಯ ವಿವಾಹಗಳು ಅಸಿಂಧು ವಿವಾಹಗಳಾಗಿದ್ದು, ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವೂ ಸಹ ಲೈಂಗಿಕ ಅಪರಾಧಗಳೆಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ರೀತಿಯ ಹಲವಾರು ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಲಾಗಿದೆ. ಈ ಎಲ್ಲ ಸಾಮಾಜಿಕ ಪಿಡುಗುಗಳಿಂದ ಮಕ್ಕಳನ್ನು ರಕ್ಷಿಸಲು ಹಾಗೂ ಮಕ್ಕಳಿಗೆ ಸುರಕ್ಷಿತವಾದ ವಾತಾವರಣವನ್ನು ಕಲ್ಪಿಸಲು ಈ ಕಾಯ್ದೆಯ ಕುರಿತು ಮತ್ತಷ್ಟು ವ್ಯಾಪಕವಾದ ಜಾಗೃತಿಯನ್ನು ಮೂಡಿಸಿ ಎಂದು ತಿಳಿಸಿದರು.
ಮಕ್ಕಳ ಸಹಾಯವಾಣಿ-1098 ಸಂಯೋಜಕ ಶರಣಪ್ಪ ಸಿಂಗನಾಳ ಅವರು ಮಾತನಾಡಿ, ಮಕ್ಕಳ ಸಹಾಯವಾಣಿ-1098 ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಮಕ್ಕಳ ಸಹಾಯವಾಣಿ-1098ರ ವಿಷಯ ನಿರ್ವಾಹಕ ರಾಘವೇಂದ್ರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯು ದತ್ತು ಮಾಸಾಚರಣೆಯ ಹಿನ್ನಲೆ ಕುರಿತಾದ ದತ್ತು ಸಂಕಲ್ಪ ಸಂದೇಶವನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ತಿಪ್ಪನಾಳಿನ ಶ್ರೀ ಪಾರ್ವತಿಮ್ಮ ಶೇಖರಗೌಡ ಎಜುಕೇಶನ್ ಆಂಡ್ ರೂರಲ್ ಡೆವಲಪ್ಮೇಂಟ್ ಟ್ರಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸೇರಿದಂತೆ ಸಿರವಾರದ ವಸತಿ ಶಾಲೆ ಒಟ್ಟು 250 ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್