
ಬಳ್ಳಾರಿ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಂಡಳಿ ವತಿಯಿಂದ ಕ್ಲಸ್ಟರ್ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕಾಗಿ ಪ್ರಸ್ತಾವನೆಗಳಿಗೆ ಆಹ್ವಾನಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಣಮೆಣಸಿನಕಾಯಿ, ಈರಳ್ಳಿ, ಬಾಳೆ, ದಾಳಿಂಬೆ ಮತ್ತು ಅಂಜೂರ ಬೆಳೆಗಳ ಕ್ಲಸ್ಟರ್ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮಾಡಲು ಅವಕಾಶವಿದ್ದು, ಅನುಷ್ಠಾನ ಮಾಡಲು ಎಷ್ಟಿಮೆಟಿಂಗ್ ಏಜೆನ್ಸಿಗಳು ಮುಂದೆ ಬಂದಲ್ಲಿ ರೈತರಿಗೆ ಹೆಚ್ಚಿನ ಸಹಾಯಧನ ಮತ್ತು ನೆರವು ಒದಗಿಸಿಕೊಡಲಾಗುತ್ತದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು (ಎನ್‍ಹೆಚ್‍ಬಿ) ದೇಶದ ಹಣ್ಣು, ತರಕಾರಿ, ಪುಷ್ಪ, ತೋಟದ ಬೆಳೆ ಮತ್ತು ಸಂಬಾರು ಬೆಳೆಗಳ ಸಮಗ್ರ ಅಭಿವೃದ್ಧಿ ಗುರಿ ಹೊಂದಿದ್ದು, ಕ್ಲಸ್ಟರ್ ಡೆವಲಪ್ ಮೆಂಟ್ ಪ್ರೋಗ್ರಾಂ (ಸಿಡಿಪಿ) ಎಂಬ ಹೊಸ ಯೋಜನೆಯನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನ ಮಾಡಲು ಕ್ರಮಕೈಗೊಂಡಿದೆ.
ಈ ಯೋಜನೆಯ ಮುಖ್ಯ ಉದ್ದೇಶ, ಒಂದು ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯಬಹುದಾದ ಬೆಳೆಯನ್ನು ಕ್ಲಸ್ಟರ್ ರೂಪದಲ್ಲಿ ಒಗ್ಗೂಡಿಸಿ ಉತ್ಪಾದನೆ-ಸಂಸ್ಕರಣೆ-ಸಂಗ್ರಹ-ಮಾರುಕಟ್ಟೆ-ರಫ್ತು ಸರಪಳಿಯನ್ನು ಬಲಪಡಿಸುವುದಾಗಿದೆ.
ಈ ಕ್ಲಸ್ಟರ್ ಗಳಿಗೆ ಎನ್.ಹೆಚ್.ಬಿ ಯಿಂದ ಹಣಕಾಸು ನೆರವು ನೀಡಲಾಗುವುದು. ರಾಷ್ಟ್ರೀಯ ತೋಟಗಾರಿಕೆ ಬೋರ್ಡ್ (ಎನ್.ಹೆಚ್.ಬಿ) ಸಿ.ಡಿ.ಪಿ ಯನ್ನು ಜಾರಿಗೆ ತರಲು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ.
ರಾಜ್ಯ ತೋಟಗಾರಿಕೆ ಮಿಷನ್ ಸಿ.ಡಿ.ಪಿ ಜಾರಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಜವಾಬ್ದಾರಿಯಾಗಿದ್ದು, ಇದರ ಪ್ರಮುಖ ಪಾತ್ರವು ಬೆಳೆಯ ಕ್ಲಸ್ಟರ್ ಆಯ್ಕೆ, ಕಾರ್ಯಗತಗೊಳಿಸುವ ಸಂಸ್ಥೆ ಗುರುತಿಸುವುದು (ಐ.ಎ), ಯೋಜನೆಯ ಮೇಲ್ವಿಚಾರಣೆ ಮತ್ತು ತಳಮಟ್ಟದ ಪರಿಶೀಲನೆಯಾಗಿದೆ. ಕ್ಲಸ್ಟರ್ ನಲ್ಲಿನ ಗುರುತಿಸಲಾದ ಪ್ರಮುಖ ಬೆಳೆಯ ವಾರ್ಷಿಕ ಫಾರ್ಮ್ ಗೇಟ್ ಮೌಲ್ಯ (ಎಫ್.ಜಿ.ವಿ) ಕನಿಷ್ಠ 100 ಕೋಟಿ ಇದ್ದೇ ಇರಬೇಕು.
ಕ್ಲಸ್ಟರ್ ನ ಗ್ರಾಮಗಳು ಗರಿಷ್ಠ ಮೂರು ಜಿಲ್ಲೆಗೆ ಮಾತ್ರ ಸೀಮಿತವಾಗಿರಬೇಕು. ಈ ಯೋಜನೆಯನ್ನು ಕಾರ್ಯಗತಗೊಳಿಸುವ ಸಂಸ್ಥೆ (ಇಂಪ್ಲಿಮೆಂಟಿಂಗ್ ಏಜೆನ್ಸಿ) (ಐ.ಎ) ಮೂಲಕ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆದು ಅನುಷ್ಠಾನ ಮಾಡುವುದು ಕಡ್ಡಾಯವಾಗಿದೆ. ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಕಾನೂನುಬದ್ದ ಸಂಸ್ಥೆಗಳಾಗಿರಬೇಕು. ಅವು ರೈತ ಉತ್ಪಾದಕ ಮತ್ತು ಅವುಗಳ ಫೆಡರೇಶನ್ ಗಳು, ಸಹಾಕಾರ ಸಂಘಗಳು, ಪಾಲುದಾರಿಕೆ ಫರ್ಮ್ ಗಳು, ಕಂಪನಿಗಳು ಅಥವಾ ಇವೆಲ್ಲದರ ಸಂಯೋಜನೆ ಸೇರಬಹುದು.
ಇಂಪ್ಲಿಮೆಂಟಿಂಗ್ ಏಜೆನ್ಸಿಯಾಗಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಖರ್ಚಿನ ಘಟಕಕ್ಕೆ ಬೇಕಾದ ಈಕ್ವಿಟಿ ಕೊಡುಗೆಗೆ ಸಮಾನವಾದ ಅಥವಾ ಅದಕ್ಕಿಂತ ಹೆಚ್ಚು ನೆಟ್ ವರ್ತ್ ಸಂಸ್ಥೆಯು ಹೊಂದಿರಬೇಕು. ಸಂಸ್ಥೆಯು ಯೋಜನೆಗೆ ಐಎ ಕಾಸ್ಟ್ ಕಂಪೋನೆಂಟ್ ಕನಿಷ್ಠ ಶೇ.20 ಅನ್ನು ಈಕ್ವಿಟಿಯಾಗಿ ಹೂಡಿಕೆ ಮಾಡಿರಬೇಕು.
ಸಂಸ್ಥೆಯು ಕೃಷಿ/ ತೋಟಗಾರಿಕೆ ಕ್ಷೇತ್ರಗಳಲ್ಲಿ ಅನುಭವ ಹೊಂದಿರಬೇಕು ಮತ್ತು ಅದು ದಾಖಲೆ ಆಧಾರಿತವಾಗಿರಬೇಕು. ಸಂಸ್ಥೆಯ ವಾರ್ಷಿಕ ಒಟ್ಟು ಆದಾಯ ಯೋಜನೆಯ ಒಟ್ಟು ವೆಚ್ಚಕ್ಕೆ ಸಮಾನವಾಗಿರಬೇಕು. ಐಎ ಕಾಸ್ಟ್ ಕಂಪೋನೆಂಟ್ ಕನಿಷ್ಠ ಶೇ.20 ಕ್ಕೆ ಸಮಾನವಾದ ಸಾಲವನ್ನು ಆರ್‍ಬಿಐ ಅನುಮೋದಿತ ವ್ಯವಹಾರಿಕ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯಬೇಕು. ಈ ಯೋಜನೆಯ ಪೂರ್ಣ ಅನುಷ್ಠಾನ ಇಪ್ಲಿಮೆಂಟಿಂಗ್ ಎಜೆನ್ಸಿಯದ್ದಾಗಿದ್ದು, ಯೋಜನೆಯ ವ್ಯಾಪ್ತಿ, ಗುರಿಗಳು, ವಿಧಾನ ಮತ್ತು ಹಣಕಾಸು ಯೋಜನೆ ಒಳಗೊಂಡ ವಿಸ್ತ್ರುತ ಯೋಜನಾ ವರದಿ (ಡಿ.ಪಿ.ಆರ್) ತಯಾರಿಸಿ, ಅನುಮೋದನೆ ಪಡೆಯುವುದರಿಂದ ಅನುಷ್ಠಾನದವರೆಗಿನ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಬೇಕು.
ಇಪ್ಲಿಮೆಂಟಿಂಗ್ ಎಜೆನ್ಸಿಗೆ ನೀಡಲಾಗುವ ಗರಿಷ್ಠ ಹಣಕಾಸು ಸಹಾಯವು ಕ್ಲಸ್ಟರ್ ನ ಮುಖ್ಯ ಬೆಳೆಯ ವಾರ್ಷಿಕ ಫಾರ್ಮ್ ಗೇಟ್ (ಎಫ್.ಜಿ.ವಿ) ಮೌಲ್ಯದ ಶೇ.25 ವರೆಗೆ ಇರಲಿದೆ. ರೈತರಿಗೆ ನೀಡುವ ನೆರವು ಐಎ ಗೆ ನೀಡುವ ನೆರವಿಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ.
ರೈತರ ಹಾಗೂ ಐಎ ಗೆ ಇಬ್ಬರಿಗೂ ನೀಡಲಾಗುವ ಹಣಕಾಸು ಸಹಾಯವು ಮಾರ್ಗಸೂಚಿಗಳಲ್ಲಿ ನೀಡಿರುವ ಘಟಕ ವೆಚ್ಚದ ಪ್ರಕಾರವಾಗಿರುತ್ತದೆ. ಐಎ ಗೆ ನೀಡುವ ಹಣಕಾಸು ನೆರವು ಕ್ರೇಡಿಟ್ ಲಿಂಕ್ ಆಗಿರುತ್ತದೆ.
ರೈತ ಘಟಕದ ಸಹಾಯಧನವನ್ನು ಸಿಡಿಪಿ ಸುರಕ್ಷಾ ಪೋರ್ಟಲ್ ಮೂಲಕ ಡಿಬಿಟಿ ಮಾದರಿಯಲ್ಲಿ ನೇರವಾಗಿ ಜಮಾ ಮಾಡಲಾಗುವುದು. ಯೋಜನೆಯ ಅನುಷ್ಠಾನದ ಅವಧಿ ಗರಿಷ್ಠ 3 ವರ್ಷದಾಗಿದ್ದು, ಇಂಪ್ಲಿಮೆಂಟಿಂಗ್ ಏಜೆನ್ಸಿ ಯೋಜನೆಯನ್ನು ಸಂಪೂರ್ಣವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದರೆ ಶೇ.5 ಹೆಚ್ಚುವರಿ ಪ್ರೋತ್ಸಾಹ ಧನ ದೊರೆಯಲಿದೆ.
ಹೊಸ ತಂತ್ರಜ್ಞಾನ, ನವೀನ ಚಟುವಟಿಕೆಗಳಿಗೆ ಹೆಚ್ಚಿನ ನೆರವು ನೀಡಲಾಗುವುದು. ಎಲ್ಲಾ ಅನುದಾನಗಳನ್ನು ಸಿಡಿಪಿ ಸುರಕ್ಷಾ ಪೋರ್ಟಲ್ ಮೂಲಕ ಡಿಜಿಟಲ್ ರೀತಿಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ ಕೋಟಿಮನಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್