


ಕಂಪ್ಲಿ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಬಡವರ ಪರ ಸರ್ಕಾರ ಎಂದು ನಿರೂಪಿಸಿದೆ ಎಂದು ಕಂಪ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ರಾವ್ ಅವರು ಹೇಳಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2025-26ನೇ ಸಾಲಿನ ಕ್ಷೇತ್ರ ಪ್ರಚಾರ ಕಾರ್ಯಕ್ರಮದಡಿ 10 ದಿನಗಳ ಕಾಲ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಪಂ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಅಭಿವೃದ್ಧಿ ಯೋಜನೆಗಳ ಕುರಿತ ಬೀದಿ ನಾಟಕ ಪ್ರದರ್ಶನಕ್ಕೆ ಕಂಪ್ಲಿ ತಾಲ್ಲೂಕಿನ ಸಣಾಪುರ ಮತ್ತು ಇಟಗಿ ಗ್ರಾಪಂ ಗಳಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಜನರ ಜೀವನಮಟ್ಟ ಸುಧಾರಣೆಗೊಳ್ಳುತ್ತಿದೆ. ರಾಜ್ಯ ಸರ್ಕಾರವು ಬಡವರ ಪರ ಕಾಳಜಿ ಹೊಂದಿದ್ದು, ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನೇ ಜಾರಿಗೊಳಿಸಿದೆ. ಅದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಿಂದ ಬಸ್ ಗಳಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ಉಚಿತವಾಗಿ ಸಂಚರಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 2000 ರೂ. ಹಣದಿಂದ ಮನೆ ಯಜಮಾನಿಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಗೃಹ ಜ್ಯೋತಿಯಡಿ ನೋಂದಾಯಿಸಿಕೊಂಡ ಎಲ್ಲ ಮನೆಗಳಿಗೆ ಶೂನ್ಯ ಮೊತ್ತದ ಬಿಲ್ ಬರುತ್ತಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ. ನಿರುದ್ಯೋಗ ಯುವಕ-ಯುವತಿಯರಿಗೆ ಯುವನಿಧಿ ಯೋಜನೆಯಡಿ ಸಹಾಯಧನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ನಂತರ ಚಿಗುರು ಕಲಾತಂಡದ ಹುಲುಗಪ್ಪ ಎಸ್.ಎಂ ನೇತೃತ್ವದಲ್ಲಿ ಎಚ್.ರಮೇಶ್, ಆನಂದ.ಬಿ, ಎರ್ರಿಸ್ವಾಮಿ, ವೆಂಕಟೇಶ್.ಎಂ., ನವೀನ್.ಎಂ., ಹೆಚ್.ಗಂಗಮ್ಮ, ರುತಮ್ಮ ಸೇರಿದಂತೆ ಕಲಾವಿದರು ಒಳಗೊಂಡು ಬೀದಿ ನಾಟಕ ಕಾರ್ಯಕ್ರಮದ ಮೂಲಕ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಇತರೆ ಅಭಿವೃದ್ಧಿ ಯೋಜನಗೆಳ ಕುರಿತು ಅತ್ಯಂತ ಆಕರ್ಷಣೀಯವಾಗಿ ಬೀದಿ ನಾಟಕ ಪ್ರದರ್ಶಿಸಿ, ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.
ಈ ಸಂದರ್ಭದಲ್ಲಿ ಸಣಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ರಮಣಯ್ಯ, ಉಪಾಧ್ಯಕ್ಷರಾದ ಸಾವಿತ್ರಿ, ಸದಸ್ಯರುಗಳಾದ ವೀರನಗೌಡ ರೆಡ್ಡಿ, ಹೆಚ್.ಹೊನ್ನೂರಮ್ಮ, ಹುಲಿಗೆಮ್ಮ, ಮರಿಯಮ್ಮ, ಬಸವರಾಜ್ ಕುರುಗೋಡು, ಕೆ.ಭಾರತಿ, ನಾಗಮ್ಮ ಆರ್.ಕೆ., ಗವಿಸಿದ್ದಪ್ಪ, ಜ್ಯೋತಿ, ರತ್ನಮ್ಮ, ಸಣ್ಣ ಬಾಲೆ ಸಾಬ್, ಗೂಳ್ಯಮ್ಮ, ಈರಮ್ಮ ವಡ್ಡರ್, ಫಕೀರಪ್ಪ.ಕೆ, ಭಾಸ್ಕರ್, ಲಕ್ಷ್ಮಿ, ಲಕ್ಷ್ಮಿದೇವಿ, ವೆಂಕಟೇಶ್.ಜಿ., ನೆಟ್ಕಲ್ಲಪ್ಪ, ಕೆ.ಸಂಧ್ಯಾ, ಸಾವಿತ್ರಿ ಸೇರಿದಂತೆ ಗ್ರಾಮದ ಹಿರಿಯರು, ಸಾರ್ವಜನಿಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್