

ಬಳ್ಳಾರಿ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯರು ಜಾತಿ, ಮತ, ಪಂಥ, ಭೇದಭಾವ ಮರೆತು ಭಾರತದ ಐಕ್ಯತೆಗಾಗಿ ಶ್ರಮಿಸುವ ಮೂಲಕ ದೇಶಪ್ರೇಮ ಹೊಂದಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದಡಿಯ ಮೇರಾ ಯುವ ಭಾರತ್ ಕೇಂದ್ರ, ಮಹಾನಗರ ಪಾಲಿಕೆ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ರಾಷ್ಟ್ರೀಯ ಯೋಜನಾ ಘಟಕ, ಪದವಿಪೂರ್ವ ಕಾಲೇಜುಗಳು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಂಯುಕ್ತಾಶ್ರಯದಲ್ಲಿ ಉಕ್ಕಿನ ಮನುಷ್ಯ ಮತ್ತು ರಾಷ್ಟ್ರೀಯ ಏಕತೆಯ ಪ್ರತಿಪಾದಕ ಸರ್ದಾರ್ ವಲ್ಲಭಭಾಯಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಏಕತಾ ನಡಿಗೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಮೊದಲ ಉಪಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ‘ಉಕ್ಕಿನ ಮನುಷ್ಯ’ ಎಂದೇ ಪ್ರಖ್ಯಾತರಾಗಿದ್ದರು. ಭಾರತದ 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು ಎಂದು ತಿಳಿಸಿದರು.
ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು, ತ್ಯಾಗ-ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಇಂದಿನ ಯುವ ಪೀಳಿಗೆ ಉನ್ನತ ಮಟ್ಟದ ಸ್ಥಾನ ಹೊಂದುವ ಮೂಲಕ ಸ್ವ-ದೇಶದಲ್ಲಿಯೇ ದುಡಿಯಬೇಕು. ದೇಶದ ಜಿಡಿಪಿ ಹೆಚ್ಚಳಕ್ಕೆ ಕಾರಣೀಭೂತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಏಕತಾ ನಡಿಗೆಯ ರಾಜ್ಯ ಸಂಚಾಲಕ ಮಂಜುನಾಥ ಬಾಳೆಕಾಯಿ ಅವರು, ಪ್ರಪಂಚದಲ್ಲಿಯೇ ಸದೃಢ ಹೊಂದಿದ ದೇಶ ನಮ್ಮದು. ನಮ್ಮ ದೇಶದ ಸೈನಿಕರ ಉಸಿರಿನಿಂದ ದೇಶದಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಚಂದ್ರನ ಮೇಲೆ ಮತ್ತು ಮುಂದಿನ ದಿನಗಳಲ್ಲಿ ಮಂಗಳನ ಅಂಗಳದಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜ ಹಾರಾಡಲಿದೆ ಎಂದು ಸೇನೆಯ ಕರ್ತವ್ಯವನ್ನು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಆತ್ಮ ನಿರ್ಭರ ಭಾರತ್ ಕುರಿತಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಗಮನ ಸೆಳೆದ ಏಕತಾ ನಡಿಗೆ : ಕಾರ್ಯಕ್ರಮಕ್ಕೂ ಮುನ್ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಜರುಗಿದ ಏಕತಾ ನಡಿಗೆ ಜನರ ಗಮನಸೆಳೆಯಿತು.
ಏಕತಾ ನಡಿಗೆಯಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಒಳಗೊಂಡಂತೆ ಸಹಸ್ರಾರು ಜನ ಭಾಗವಹಿಸಿದ್ದು ವಿಶೇಷವಾಗಿತ್ತು.
ನಡಿಗೆಗೆ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಡಿಗೆಯು ನಗರದ ಡಾ.ರಾಜ್ ಕುಮಾರ್ ರಸ್ತೆಯ ಸರ್ಕಾರಿ (ಮಾ.ಪು) ಪದವಿಪೂರ್ವ ಕಾಲೇಜು ಮೈದಾನದಿಂದ ಆರಂಭಗೊಂಡು ಗಡಿಗಿ ಚೆನ್ನಪ್ಪ ವೃತ್ತ- ಬೆಂಗಳೂರು ರಸ್ತೆ- ಹಳೆಯ ಬ್ರೂಸ್ ಪೇಟೆ ಠಾಣೆಯ ಮುಂಭಾಗ- ಹೆಚ್.ಆರ್.ಗವಿಯಪ್ಪ ವೃತ್ತ- ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದ ವರೆಗೆ ನಡೆಯಿತು.
ಮೇರಾ ಯುವ ಭಾರತ್ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಸಂಜೀವ್ ಬೊಕ್ಕೆ, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಎನ್‍ಎಸ್‍ಎಸ್ ಘಟಕದ ಯೋಜನಾಧಿಕಾರಿ ಡಾ.ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕಾರ್, ಸುರೇಖಾ ಮಲ್ಲನಗೌಡ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ, ಜಿಲ್ಲಾ ಸಂಚಾಲಕರಾದ ಅನೀಲ್ ಕುಮಾರ್ ಮೋಕಾ, ಹುಲುಗಮ್ಮ, ಎಂ.ಎಸ್.ಸುಂಕಪ್ಪ ಸೇರಿದಂತೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ-ಸೇವಕರು, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್