
ಬಳ್ಳಾರಿ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯ, ಆರ್‍ಬಿಐ, ಎಸ್‍ಎಲ್‍ಬಿಸಿ ಮತ್ತು ಬಳ್ಳಾರಿ ಜಿಲ್ಲಾಡಳಿತ ನಿರ್ದೇಶನದಂತೆ ನಿಷ್ಕ್ರಿಯ ಖಾತೆಗಳ ಮುಚ್ಚುವಿಕೆ ಮತ್ತು ಮರು-ಸಕ್ರಿಯಗೊಳಿಸುವಿಕೆಗಾಗಿ ನವೆಂಬರ್ 21 ರ ಶುಕ್ರವಾರ ಮಧ್ಯಾಹ್ನ 12.30 ಗಂಟೆಗೆ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ `ನಿಮ್ಮ ಹಣ-ನಿಮ್ಮ ಹಕ್ಕು, ನಿಷ್ಕ್ರಿಯ ಖಾತೆಗಳು, ಹಕ್ಕು ಪಡೆಯದ ಠೇವಣಿಗಳ’ ಜಾಗೃತಿ ಶಿಬಿರ ನಡೆಯಲಿದೆ ಎಂದು ಲೀಡ್ ಬ್ಯಾಂಕ್‍ನ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಗಿರೀಶ್ ವಿ.ಕುಲಕರ್ಣಿ ಅವರು ತಿಳಿಸಿದ್ದಾರೆ.
ಹಣಕಾಸು ಸೇವೆಗಳ ಇಲಾಖೆಯು ಅಕ್ಟೋಬರ್ 03 ರಿಂದ ಡಿಸೆಂಬರ್ 31 ರವರೆಗೆ ನಿಷ್ಕ್ರಿಯ ಖಾತೆಗಳು, ಹಕ್ಕು ಪಡೆಯದ ಠೇವಣಿಗಳು, ವಿಮಾ ಪಾಲಿಸಿ ಮೊತ್ತ, ಷೇರುಗಳನ್ನು ಇತ್ಯರ್ಥಪಡಿಸಲು ಅಭಿಯಾನ ಪ್ರಾರಂಭಿಸಿದೆ.
ದಾಖಲೆಗಳ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ 2,73,484 ನಿಷ್ಕ್ರಿಯ ಖಾತೆಗಳಿದ್ದು, ಒಟ್ಟು 73.54 ಕೋಟಿ ರೂ. ಮೊತ್ತವಿದೆ. 10 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಇರುವ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವ ಅಥವಾ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಷ್ಕ್ರಿಯ ಖಾತೆಗಳನ್ನು ಮರು-ಸಕ್ರಿಯಗೊಳಿಸಿಕೊಳ್ಳಬೇಕು.
ಆನ್‍ಲೈನ್ https://udgam.rbi.org.in ವೆಬ್‍ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು ಅಥವಾ ಗ್ರಾಹಕರು ತಮ್ಮ ಹತ್ತಿರದ ಬ್ಯಾಂಕ್ ಶಾಖೆ, ಎಲ್‍ಐಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಷ್ಕ್ರಿಯ ಖಾತೆಗಳ ಮುಚ್ಚುವಿಕೆ ಮತ್ತು ಮರು-ಸಕ್ರಿಯಗೊಳಿಸುವಿಕೆಗಾಗಿ ಇತ್ಯರ್ಥಪಡಿಸಿಕೊಳ್ಳಬೇಕು. ಬಳ್ಳಾರಿಯ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್