
ಹಾಸನ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ದಿ ನಿಗಮ (ನಿ) ಹಾಸನ ಜಿಲ್ಲೆ ವತಿಯಿಂದ ಜಿಲ್ಲಾದ್ಯಂತ ವಾಸವಿರುವ ಕ್ರಿಶ್ಚಿಯನ್ ಸಮುದಾಯದ ಜನಾಂಗದವರಿಗೆ 2025-26ನೇ ಸಾಲಿನಲ್ಲಿ ಈ ಕೆಳಕಂಡ ವಿವಿಧ ಯೋಜನೆಗಳಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯಧನ ಸೌಲಭ್ಯಗಳನ್ನು ನೀಡಲು ನ.30 ರವರೆಗೆ ಆನ್‌ಲೈನ್ Website: https://kccdclonline.karnataka.gov.in ಮುಖೇನ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯೋಜನೆಗಳಿಗೆ ಆನ್‌ಲೈನ್ ಮುಖೇನ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
‘ಅರಿವು’ ಶಿಕ್ಷಣ ಸಾಲ ಯೋಜನೆ: ಈ ಯೋಜನೆಯಡಿ CET/NEET ಪರೀಕ್ಷೆಯ ಮುಖೇನ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ರೂ.50,000 ದಿಂದ ರೂ.5 ಲಕ್ಷದವರೆಗೆ) ಸಾಲ ನೀಡಲಾಗುವುದು.
ವೃತ್ತಿ ಪ್ರೋತ್ಸಾಹ ಯೋಜನೆ: ಈ ಯೋಜನೆಯಡಿ 1,00,000/- ರೂ.ಗಳ ಸಾಲ ಮತ್ತು ಸಹಾಯಧನ ನೀಡಲಾಗುವುದು. (ಈ ಮೊತ್ತದಲ್ಲಿ ಶೇ.50 ರಷ್ಟು ಸಾಲ ಹಾಗೂ ಶೇ.50 ರಷ್ಟು ಸಹಾಯಧನ)
ಶ್ರಮಶಕ್ತಿ ಸಾಲ ಹಾಗೂ ಸಹಾಯಧನ ಯೋಜನೆ: ಈ ಯೋಜನೆಯಡಿ 50,000/- ರೂ.ಗಳ ಸಾಲ ಮತ್ತು ಸಹಾಯಧನ ನೀಡಲಾಗುವುದು. (ಈ ಮೊತ್ತದಲ್ಲಿ ಶೇ.50 ರಷ್ಟು ಸಾಲ ಹಾಗೂ ಶೇ.50 ರಷ್ಟು ಸಹಾಯಧನ)
ಸ್ವಾವಲಂಬಿ ಸಾರಥಿ ಯೋಜನೆ: ಈ ಯೋಜನೆಯಡಿ ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್/ ಶೆಡ್ಯೂಲ್ ಬ್ಯಾಂಕ್/ ಆರ್.ಬಿ.ಐ ನಿಂದ ಮಾನ್ಯತೆ ಪಡೆದಿರುವ ವಿವಿಧ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ನಿಗಮದ ವತಿಯಿಂದ ವಾಹನದ ಮೌಲ್ಯದ ಶೇ.50 ರಷ್ಟು ಸಹಾಯಧನ ಗರಿಷ್ಠ 3 ಲಕ್ಷಗಳವರೆಗೆ ಮತ್ತು ಪ್ಯಾಸೆಂಜರ್ ಆಟೋರಿಕ್ಷಾ ವಾಹನ ಖರೀದಿಸಲು ಗರಿಷ್ಠ ರೂ. 75,000 ಗಳ ಸಹಾಯಧನವನ್ನು ನೀಡಲಾಗುವುದು.
ಗಂಗಾ ಕಲ್ಯಾಣ ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆಯಲು, ಪಂಪು ಅಳವಡಿಕೆ ಹಾಗೂ ನೀರಾವರಿ ವಿದ್ಯುದ್ಧೀಕರಣಕ್ಕೆ ಸಂಪೂರ್ಣ ಸಹಾಯಧನ ನೀಡಲಾಗುವುದು.
ಶ್ರಮಶಕ್ತಿ (ವಿಶೇಷ ಮಹಿಳಾ) ಯೋಜನೆ: ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ವಿಧವೆ/ ವಿಚ್ಚೇದಿತ/ ಅವಿವಾಹಿತ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ನಿಗಮದಿಂದ 50,000 ಗಳಿಗೆ ಶೇ 50 ರಷ್ಟು ಸಾಲ ಹಾಗೂ ಶೇ 50 ರಷ್ಟು ಸಹಾಯಧನವನ್ನು ಕಲ್ಪಿಸಲಾಗುವುದು. ಸಾಲಕ್ಕೆ ಶೇ.4 ರ ಬಡ್ಡಿ ದರವನ್ನು ವಿಧಿಸಲಾಗುವುದು.
ವ್ಯಾಪಾರ/ಉದ್ದಿಮೆ ನೇರಸಾಲ ಯೋಜನೆ : ಈ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಫಲಾನುಭವಿಗಳ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಮಾತ್ರ ಗರಿಷ್ಠ 20 ಲಕ್ಷದವರೆಗೆ ಸಾಲವನ್ನು ಒದಗಿಸಲಾಗುವುದು.
ವಿದೇಶ ವ್ಯಾಸಂಗಕ್ಕೆ ಸಾಲ ಯೋಜನೆ: ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವ ವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ, ವಿದ್ಯಾಭ್ಯಾಸ ಪಡೆಯಲು ರೂ.20 ಲಕ್ಷವರೆಗೆ ಸಾಲವನ್ನು ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಸಾಲವನ್ನು ಒದಗಿಸಲಾಗುವುದು.
ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ : ಸ್ವ ಉದ್ಯೋಗ ಕಲ್ಪಿಸಿಕೊಳ್ಳಲು ಮಹಿಳಾ ಸ್ವಸಹಾಯ ಗುಂಪುಗಳಿಗೆ ಗರಿಷ್ಠ 2 ಲಕ್ಷ ಗಳವರೆಗೆ ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ (ನಿ) ಮೌಲಾನಾ ಆಜಾದ್ ಭವನ, 1ನೇ ಮಹಡಿ, ಆಕಾಶವಾಣಿ ಕ್ವಾಟ್ರಸ್ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಶ್ರೀ ವಿದ್ಯಾ ಗಣಪತಿ ಅಡ್ಡರಸ್ತೆ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರ, ಹಾಸನ-573202 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಅರ್ಜಿಗಳನ್ನು ಆನ್‌ಲೈನ್‌ನಲ್ಲಿ Website : https://kccdclonline.karnataka.gov.in ಮೂಲಕ ಸಲ್ಲಿಸಲು ಕೊನೆಯ ದಿನಾಂಕ ನ.30 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08172-246333 ಸಂಪರ್ಕಿಸಲು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa