

ಕೊಪ್ಪಳ, 19 ನವೆಂಬರ್ (ಹಿ.ಸ.)
ಆ್ಯಂಕರ್ : ಹುಟ್ಟಿದ 28 ದೊಳಗಿನ ಮಗುವನ್ನು ನವಜಾತ ಶಿಶು ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಮಗುವಿನ ಸ್ವಚ್ಛತೆ ಕಾಪಾಡದಿದ್ದರೆ, ಶಿಶುವಿಗೆ ಸೋಂಕು ಉಂಟಾಗಿ, ಕಾಯಿಲೆ ಉಲ್ಬಣವಾಗುತ್ತದೆ. ಆದ್ದರಿಂದ ಸ್ವಚ್ಛತೆ ಕಾಪಾಡಿ, ಮಗುವನ್ನು ಕಾಯಿಲೆಯಿಂದ ಕಾಪಾಡಬೇಕು ಎಂದು ಕೊಪ್ಪಳದ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಅಕ್ಷತಾ ಅವರು ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಕೊಪ್ಪಳದ ಹಮಾಲರ ಕಾಲೋನಿಯ ನಮ್ಮ ಕ್ಲಿನಿಕ್ ಇವರ ಸಂಯುಕ್ತಾಶ್ರಯದಲ್ಲಿ ಹಮಾಲರ ಕಾಲೋನಿಯಲ್ಲಿ ಆಯೋಜಿಸಿದ ನ್ಯುಮೋನಿಯ ಕಾಯಿಲೆ ಯಶಸ್ವಿಯಾಗಿ ಕೊನೆಗಾಣಿಸಲು ಸಾಮಾಜಿಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷ ನವೆಂಬರ್ 12 ರಂದು ನ್ಯುಮೋನಿಯ ಕಾಯಿಲೆ ಯಶಸ್ವಿಯಾಗಿ ಕೊನೆಗಾಣಿಸಲು ಸಾಮಾಜಿಕ ಜಾಗೃತಿ ಕಾರ್ಯಕ್ರಮ ಆಚರಿಸಲಾಗುತ್ತದೆ. ಇದರ ಉದ್ದೇಶ 5 ವರ್ಷಗೊಳಗಿನ ಮಕ್ಕಳಿಗೆ ನ್ಯುಮೋನಿಯ ಕಾಯಿಲೆಯಿಂದ ಸಂಭವಿಸುವ ಮರಣವನ್ನು ತಡೆಗಟ್ಟುವ ಬಗ್ಗೆ ತಾಯೆಂದಿರರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ನ್ಯುಮೋನಿಯಾ ತೊಲಗಿಸಿ, ಆರೋಗ್ಯವಂತ ಬಾಲ್ಯ ಒದಗಿಸಿ ಬಾಲ್ಯದ ನ್ಯುಮೋನಿಯಾ 5 ವರ್ಷದೊಳಗಿನ ಮಕ್ಕಳಲ್ಲಿ ಪ್ರಮುಖ ಸಾಂಕ್ರಾಮಿಕ/ ಮಾರಣಾತಿಕ ಕಾಯಿಲೆಯಾಗಿದೆ. 5 ವರ್ಷದೊಳಗಿನ ಮಕ್ಕಳು ಆಹಾರ ಸೇವಿಸದಿದ್ದರೆ, ಸಾಮನ್ಯ ಚಟುವಟಿಕೆಗಿಂತ ಕಡಿಮೆ ಇದ್ದರೆ, ವೇಗದ ಉಸಿರಾಟವಿದ್ದರೆ, ತೀವ್ರ ರೀತಿಯ ಪಕ್ಕೆಸೆಳತವಿದ್ದರೆ, ಜ್ವರ, ಕೆಮ್ಮು, ಇವುಗಳು ನ್ಯುಮೋನಿಯಾ ಲಕ್ಷಣಗಳಾಗಿದ್ದು, ನಿರ್ಲಕ್ಷ್ಯ ಮಾಡದೇ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿ, ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು. ಈಗ ಪ್ರಸ್ತುತ ಸಮಯದಲ್ಲಿ ಚಳಿಗಾಲ ಇರುವುದರಿಂದ ಮಕ್ಕಳ ಆರೋಗ್ಯದ ಕಡೆ ಪಾಲಕರು ಹೆಚ್ಚು ಗಮನ ಆರಿಸುವಂತೆ ತಿಳಿಸಿದರು.
ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಆರ್.ಸಿ.ಹೆಚ್ ಕಾರ್ಯಕ್ರಮ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸವಿವರವಾಗಿ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಗಂಗಮ್ಮ ಅವರು ಬಾಲ್ಯವಿವಾಹ, ಮಕ್ಕಳ ಪಾಲನೆ ಪೋಷಣೆ ಕುರಿತು ವಿವರವಾಗಿ ಮಾತನಾಡಿದರು. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಂದನಾ ಅವರು ಶಿಶು ಮತ್ತು ಎಳೆಯಮಕ್ಕಳ ಆಹಾರ ಪದ್ಧತಿಯ ಕುರಿತು ತಿಳಿಸಿದರು. ತಾಲೂಕಾ ಆಶಾ ಮೇಲ್ವಿಚಾರಕಿ ಸಂಧ್ಯಾ ಅವರು ಮಕ್ಕಳಿಗೆ ಬರುವ ಬಾಲ್ಯಾವಾಧಿ ಕಾಯಿಲೆ ಮತ್ತು ಕಾಯಿಲೆಯ ಲಕ್ಷಣಗಳು ಹಾಗೂ ಆ ಕಾಯಿಲೆಗೆ ಪಡೆಯುವ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯಾಧಿಕಾರಿಗಳಾದ ಅನಿತಾ, ಆರೋಗ್ಯ ನಿರೀಕ್ಷಣಾಧಿಕಾರಿಳಾದ ಗೌಷಾಥ್ ಬೇಗಂ, ಶುಶ್ರೂಷಣಾಧಿಕಾರಿಗಳಾದ ಉಮಾದೇವಿ, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಸಿದ್ಧಮಲ್ಲ, ಆಶಾ ಕಾರ್ಯಕರ್ತೆಯರಾದ ಜ್ಯೋತಿ, ಪೂರ್ಣಿಮಾ, ಅಂಗನವಾಡಿ ಕಾರ್ಯಕರ್ತೆಯರಾದ, ಶೈಲಜಾ, ಮಲ್ಲಮ್ಮ, ಮಂಜುಳಾ ಹಾಗೂ ನಮ್ಮ ಕ್ಲಿನಿಕ್ ಸಿಬ್ಬಂದಿಗಳು, ಗರ್ಭಿಣಿ ಬಾಣಂತಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್