
ಗಂಗಾವತಿ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರಕಾರದ ಅಸಮರ್ಪಕ ನಿರ್ವಹಣೆ ಆರ್ಥಿಕ ಸಹಕಾರ ನೀಡದ ಕಾರಣ ರಾಜ್ಯದ ಸರಕಾರಿ ಶಾಲಾ ಕಾಲೇಜುಗಳು, ವಿವಿಗಳು ಶೋಚನೀಯ ಸ್ಥಿತಿ ತಲುಪಿದ್ದು, ದುಬಾರಿ ಶುಲ್ಕ, ಸ್ಕಾಲರ್‍ಶಿಪ್ ವಿಳಂಬ ಹಾಗು ಹಾಸ್ಟೆಲ್‍ಗಳಿಗೆ ಸರಿಯಾಗಿ ಕಿಟ್ ಇತರೆ ತಲುಪಿಸದ ಕಾರಣ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದ್ದು, ಸರಕಾರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಬೆಳಗಳಿಗೆ ಸೂಕ್ತ ಬೆಲೆ, ಸೈಬರ್ ಭದ್ರತೆ ಇತರೆ ಶೈಕ್ಷಣಿಕ ಪ್ರಗತಿಗೆ ಅಗತ್ಯ ಅಂಶಗಳನ್ನು ನಗರದಲ್ಲಿ ನಡೆದ ಎಬಿವಿಪಿ ಉತ್ತರ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಲಾಯಿತು.
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವುದು ರಾಜ್ಯ ಸರಕಾರದ ಹೊಣಗೇಡಿತನ ಕಣ್ಣಿಗೆ ರಾಚುತ್ತಿದೆ. ರಾಜ್ಯದ ಶಾಲಾ ಕಾಲೇಜುಗಳ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಸಿಬ್ಬಂದಿ ಇಲ್ಲ, ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ವಿದ್ಯಾರ್ಥಿ ವೇತನ ವಿನಾಯಿತಿ ಇಲ್ಲ, ವಿದ್ಯಾಸಿರಿ, ರೈತ ವಿದ್ಯಾನಿಧಿ, ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ಮಕ್ಕಳಿಗೆ ತಲುಪುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದ ವಿಶ್ವವಿದ್ಯಾಲಯಗಳ ಅವೈಜ್ಞಾನಿಕ ಪರೀಕ್ಷಾ ಕ್ರಮ, ಕಳಪೆ ನಿರ್ವಹಣೆಯಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಎದರಿಸುವಂತಾಗಿದೆ. ರಾಜ್ಯದಾದ್ಯಂತ ಏಕರೂಪ ಪರೀಕ್ಷಾ ಮಾದರಿಗೆ ಒತ್ತಡ ಹೇರಲಾಗುತ್ತಿದೆ. ಸರಕಾರ ಗಂಭೀರವಾಗಿ ನಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಎಬಿವಿಪಿಯಲ್ಲಿ ಒಟ್ಟು 2,73,812 ಸದಸ್ಯರಿದ್ದು, 118 ಶಾಖೆಗಳು, 182 ಸಂಪರ್ಕ ಸ್ಥಾನಗಳಲ್ಲಿ, 446 ಕಾಲೇಜು ಕಮಿಟಿ, 78 ಹಾಸ್ಟೇಲ್ ಸಮಿತಿಯ ಮೂಲಕ ಎಬಿವಿಪಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಗಂಗಾವತಿಯಲ್ಲಿ ನವೆಂಬರ್ 15 ಮತ್ತು 16 ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿದ್ದು, ರಾಜ್ಯದಾದ್ಯಂತ 86 ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದರು.
ಗೋಷ್ಟಿಯಲ್ಲಿ ಘಟಕಗಳ ಪದಾಧಿಕಾರಿಗಳಾದ ಅಭಿಷೇಕ್, ಹಿರೇಮಠ ಕಿರಣ್ ವಸ್ತ್ರದ್, ಶ್ರೇಯಾ, ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್