ನರೇಗಾ ಯೋಜನೆ ಕ್ರಿಯಾ ಯೋಜನೆ ಸಿದ್ದಪಡಿಸುವಿಕೆ ಕುರಿತು ಗ್ರಾಮ ಸಭೆ
ಕೊಪ್ಪಳ, 19 ನವೆಂಬರ್ (ಹಿ.ಸ.) : ಆ್ಯಂಕರ್ : ಗ್ರಾಮಸಭೆಗೆ ಅವಶ್ಯವಾಗಿರುವುದು ರೈತರು ಹಾಗೂ ಕೂಲಿಕಾರರ ಮೂಲಕ ಬಂದ ಬೇಡಿಕೆಗಳು ನರೇಗಾ ಕ್ರಿಯಾ ಯೋಜನೆ ತಯಾರಿಸಲು ಅವಶ್ಯವಾಗಿರುತ್ತವೆ ಎಂದು ಲೇಬಗೇರಿ ಪಂಚಾಯತ ಅಭಿವೃದ್ದಿ ಅಧಿಕಾರಿ ಸೋಮಪ್ಪ ಪೂಜಾರ ಅವರು ಹೇಳಿದರು. ಕೊಪ್ಪಳ ತಾಲೂಕಿನ ಲೇಬಗೇರಿ
ರೈತರು, ಕೂಲಿಕಾರರ ಬೇಡಿಕೆಗಳು ಕ್ರಿಯಾ ಯೋಜನೆ ತಯಾರಿಕೆಗೆ ಅವಶ್ಯಕ: ಸೋಮಪ್ಪ ಪೂಜಾರ


ರೈತರು, ಕೂಲಿಕಾರರ ಬೇಡಿಕೆಗಳು ಕ್ರಿಯಾ ಯೋಜನೆ ತಯಾರಿಕೆಗೆ ಅವಶ್ಯಕ: ಸೋಮಪ್ಪ ಪೂಜಾರ


ಕೊಪ್ಪಳ, 19 ನವೆಂಬರ್ (ಹಿ.ಸ.) :

ಆ್ಯಂಕರ್ : ಗ್ರಾಮಸಭೆಗೆ ಅವಶ್ಯವಾಗಿರುವುದು ರೈತರು ಹಾಗೂ ಕೂಲಿಕಾರರ ಮೂಲಕ ಬಂದ ಬೇಡಿಕೆಗಳು ನರೇಗಾ ಕ್ರಿಯಾ ಯೋಜನೆ ತಯಾರಿಸಲು ಅವಶ್ಯವಾಗಿರುತ್ತವೆ ಎಂದು ಲೇಬಗೇರಿ ಪಂಚಾಯತ ಅಭಿವೃದ್ದಿ ಅಧಿಕಾರಿ ಸೋಮಪ್ಪ ಪೂಜಾರ ಅವರು ಹೇಳಿದರು.

ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮ ವತಿಯಿಂದ ಲೇಬಗೇರಿ ಗ್ರಾಮದ ಕಲಾರಂಗ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ 2026-27ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಂಗವಾಗಿ ಕ್ರಿಯಾ ಯೋಜನೆ ಸಿದ್ದಪಡಿಸುವಿಕೆ ಕುರಿತು ಜರುಗಿದ ಗ್ರಾಮಸಭೆಯಲಿ ಅವರು ಮಾತನಾಡಿದರು.

ಈಗಾಗಲೇ ಮನೆ ಮನೆ ಭೇಟಿ ಮೂಲಕ ರೈತರಿಂದ, ಗ್ರಾಮಸ್ಥರಿಂದ ಕಾಮಗಾರಿ ಬೇಡಿಕೆಯನ್ನು ಪಡೆಯಲಾಗಿರುತ್ತದೆ. ವಾರ್ಡಸಭೆ ಮೂಲಕ ವಾರ್ಡನಲ್ಲಿರುವ ಜನರ ಬೇಡಿಕೆ ಕೂಡಾ ಪಡೆಯಲಾಗಿದೆ. ಅಂತಿಮವಾಗಿ ಕಾಮಗಾರಿ ಗುಚ್ಚ ತಯಾರಿಸಿ ಗ್ರಾಮಸಭೆ ಮೂಲಕ ಒಪ್ಪಿಗೆ ಪಡೆದು ಮಾನವ ದಿನಗಳ ಗುರಿಗೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯತಿಯಿಂದ ಅಂತಿಮವಾಗಿ ಅನುಮೋದನೆ ಪಡೆಯಲಾಗುತ್ತದೆ ಎಂದರು. ವಾರ್ಡವಾರು ಬಂದಿರುವ ಕಾಮಗಾರಿಗಳ ಬೇಡಿಕೆಯನ್ನು ಗ್ರಾಮಸಭೆಯಲ್ಲಿ ವಿವರಿಸಿದರು.

ತಾಲೂಕ ಪಂಚಾಯತಿಯ ಐಇಸಿ ಸಂಯೋಜಕ ದೇವರಾಜ ಪತ್ತಾರ ಅವರು ಮಾತನಾಡಿ ಗ್ರಾ.ಪಂ ಹಾಗು ಇತರೆ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆಗಳಿಂದ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುತ್ತದೆ. ರೈತರು ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಲು ಕೂಲಿ ಮತ್ತು ಸಾಮಾಗ್ರಿ ಹಣದಿಂದ ಅನುಕೂಲವಾಗುತ್ತದೆ. ತೋಟಗಾರಿಕೆ ಇಲಾಖೆಯಿಂದಲೂ ಸಹ ಸೌಲಭ್ಯ ದೊರೆಯುತ್ತದೆ. ಗ್ರಾಮ ಪಂಚಾಯತಿಯಿ0ದ ನರೇಗಾದಡಿ ಶೇ.65 ರಷ್ಟು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣಾ ಕಾಮಗಾರಿಗಳು ಅನುಷ್ಠಾನಿಸುವದು ಕಡ್ಡಾಯವಾಗಿದ್ದು, ಆಧ್ಯತೆ ಮೇರೆಗೆ ಕಾಮಗಾರಿಗಳನ್ನು ಅನುಷ್ಠಾನಿಸಿ ಎಂದರು.

ವಾರ್ಡಸಭೆಗಳ ಮೂಲಕ ಗ್ರಾಮ ಪಂಚಾಯತಿಯಿಂದ ಕಾಮಗಾರಿ ಬೇಡಿಕೆ ಪಡೆಯಲು ಈಗಾಗಲೇ ವಾರ್ಡಸಭೆ ಜರುಗಿಸಲಾಗಿದ್ದು, ಬರುವ ಏಪ್ರೀಲ್ 1 ರಿಂದ ಕಾಮಗಾರಿ ಆರಂಭಿಸಲು ಕೂಲಿಕಾರರ ಹಾಗೂ ರೈತರ ಬೇಡಿಕೆ ಸಲ್ಲಿಸಲು ಇದೊಂದು ಅವಕಾಶವಾಗಿದೆ. ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾದ ನಂತರ ಗ್ರಾಮ ಪಂಚಾಯತಿಯ ಸಿಬ್ಬಂದಿ ಹಾಗು ತಾಂತ್ರಿಕ ಸಹಾಯಕರಿಂದ ಅಗತ್ಯ ಮಾಹಿತಿ ಪಡೆದು ಕಾಮಗಾರಿ ಅನುಷ್ಠಾನಿಸಬೇಕೆಂದರು. ವೈಯಕ್ತಿಕ ಕಾಮಗಾರಿ ಜಾನುವಾರು ಶೆಡ್, ಮೆಕೆಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೊಳಿ ಶೆಡ್ ಇತ್ಯಾದಿಗಳನ್ನು ಮಾಡಿಕೊಳ್ಳಲು ಅವಕಾಶ ಇರುವದನ್ನು ಬಳಕೆ ಮಾಡಿಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು.

ವಿಶ್ವ ಶೌಚಾಲಯ ದಿನಾಚರಣೆ : ನವೆಂಬರ್-19ರ ವಿಶ್ವ ಶೌಚಾಲಯ ದಿನಾಚರಣೆ, ಎಲ್ಲರೂ ವೈಯಕ್ತಿಕ ಶೌಚಾಲಯ ಹೊಂದಬೇಕು ಹಾಗು ಶೌಚಾಲಯಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ವಿಶ್ವ ಶೌಚಾಲಯ ದಿನಾಚರಣೆ ನಿಮಿತ್ಯ ಜಾಗೃತಿ ಮೂಡಿಸಲಾಯಿತು. ಮನೆಯಲ್ಲಿರುವ ಹಿರಿಯರು, ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಅನುಕೂಲವಾಗುವದರ ಜೊತೆಗೆ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿದಂತಾಗುತ್ತದೆ. ಬಯಲು ಬಹಿರ್ದೆಸೆಯಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತೇವೆ. ಶೌಚಾಲಯ ಇಲ್ಲದವರು ಗ್ರಾಮ ಪಂಚಾಯತಿಗೆ ಅಗತ್ಯ ದಾಖಲಾತಿಗಳೋಂದಿಗೆ ಅರ್ಜಿ ಸಲ್ಲಿಸಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿ ಹಾಗು ಆಡಳಿತ ಮಂಡಳಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಶೌಚಾಲಯ ನಿರ್ಮಿಸಿಕೊಳ್ಳುವ ಎಸ್.ಸಿ ಮತ್ತು ಎಸ್.ಟಿ ಫಲಾನುಭವಿಗಳಿಗೆ 15000 ರೂ. ಮತ್ತು ಇತರೇ ವರ್ಗದವರಿಗೆ ರೂ.12000 ಪ್ರೋತ್ಸಾಹಧನ ಪಾವತಿಗೆ ಕ್ರಮವಹಿಸಲಾಗುವದು ಎಂದು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಮಾಹಿತಿ ನೀಡಿದರು.

ತಂಬಾಕು ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಜಾಗೃತಿ : ಲೇಬಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹನಮನಹಳ್ಳಿ, ಕಾಮನೂರು ಗ್ರಾಮಗಳು ಈಗಾಗಲೇ ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಅದರಂತೆ ಲೇಬಗೇರಿ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಕೈ ಜೋಡಿಸಬೇಕು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಎಂ. ಸಂಗಮೇಶ ಮತ್ತು ಸಮಾಜಿಕ ಕಾರ್ಯಕರ್ತರಾದ ಜಿ .ಸರಸ್ವತಿ ಅವರು ಮಾಹಿತಿ ನೀಡಿದರು. ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಪೊಸ್ಟರ್‌ಗಳ ಮೂಲಕ ವಿವರಿಸಲಾಯಿತು.

ಈ ಸಂದರ್ಭದಲ್ಲಿ ಲೇಬಗೇರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ದೇವಮ್ಮ ಮಹಾದೇವಪ್ಪ ಕುರಿ, ಗ್ರಾಮ ಪಂಚಾಯತ ಸದಸ್ಯರಾದ ಫಕೀರಗೌಡ್ರ ಗೊಲ್ಲರ, ಬಸವರಾಜ ಯತ್ನಟ್ಟಿ, ನಾಗಪ್ಪ ದೊಡ್ಡಮನಿ, ಸೋಮಪ್ಪ ತಳವಾರ, ಲೇಬಗೇರಿ ಗ್ರಾಮ ಪಂಚಾಯತ ಕಾರ್ಯದರ್ಶಿ ಬಸವರಾಜ ಬಿಸನಳ್ಳಿ, ಕರವಸೂಲಿಗಾರ ರಾಜಪ್ಪ ಬಂಗಾರಿ, ಡಿಇಒ ಬಸವರಾಜ ಗ್ರಾಮ ಕಾಯಕ ಮಿತ್ರ ಅಂಬಮ್ಮ, ಸಂಜಿವಿನಿ ಯೋಜನೆಯ ಒಕ್ಕೂಟದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande