
ಬಳ್ಳಾರಿ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮಾಧ್ಯಮ ಅಕಾಡೆಮಿಯು ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಗಳಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕಾ ಸಂಪಾದಕರಿಗೆ “ನ್ಯೂಸ್ ರೂಂ ನಲ್ಲಿ ಎಐ ಹಾಗೂ ಫ್ಯಾಕ್ಟ್ ಚೆಕ್” ಕುರಿತಂತೆ ನವೆಂಬರ್ 29 ರಂದು ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿದೆ.
ಪರಿಶಿಷ್ಟ ಜಾತಿಯ 35 ಮಂದಿ ಹಾಗೂ ಪರಿಶಿಷ್ಟ ಪಂಗಡದ 15 ಮಂದಿ ಒಟ್ಟು 50 ಪತ್ರಿಕಾ ಸಂಪಾದಕರಿಗೆ ತರಬೇತಿ ನೀಡಲಾಗುವುದು.
ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಪತ್ರಕರ್ತರು ಈ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ತರಬೇತಿ ಸಹಕಾರಿಯಾಗಲಿದೆ ಎಂದು ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಅವರು ತಿಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಿಕೆಗಳ ಸಂಪಾದಕರು ಈ ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಈ ಕುರಿತಂತೆ ಇಲಾಖಾ ಮಾಧ್ಯಮ ಪಟ್ಟಿಯಲ್ಲಿರುವ ಕುರಿತ ದಾಖಲೆ, ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್/ ಮತದಾರರ ಗುರುತಿನ ಚೀಟಿ ಮೊದಲಾದ ದಾಖಲೆಗಳೊಂದಿಗೆ ಗೂಗಲ್ ಫಾರ್ಮ್ https://forms.gle/s8Hv1MqbAv38G4bY77 ನ್ನು ಭರ್ತಿ ಮಾಡಿ ನವೆಂಬರ್ 21 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಯ ಆಯ್ಕೆ ಕುರಿತಂತೆ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್