
ಗದಗ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಈರುಳ್ಳಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ದರ ಪಾತಾಳಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿ ಬೀದಿಗೆ ಇಳಿದಿದ್ದಾರೆ. ಹಳ್ಳಿಯಿಂದ ನಗರಗಳವರೆಗೆ ಹೋರಾಟ ವಿಸ್ತರಿಸುತ್ತಿರುವ ನಡುವೆ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ರೈತರು ರಾಜ್ಯ ಹೆದ್ದಾರಿ ಬಂದ್ ಮಾಡಿ ಭಾರೀ ಪ್ರತಿಭಟನೆಯಲ್ಲಿ ತೊಡಗಿದರು.
ಜಿಲ್ಲೆಯ ಏಳು ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಹಾಗೂ ಮೆಕ್ಕೆಜೋಳ ಬೆಳೆದಿದ್ದರೂ, ಮಾರುಕಟ್ಟೆಯಲ್ಲಿ ಕೇವಲ 200ರಿಂದ 500 ರೂ. ಕ್ವಿಂಟಲ್ ಈರುಳ್ಳಿ ದರ ಮತ್ತು 1,500 ರಿಂದ 1,800 ರೂ. ಕ್ವಿಂಟಲ್ ಮೆಕ್ಕೆಜೋಳ ದರ ಸಿಗುತ್ತಿರುವುದು ರೈತರಿಗೆ ದೊಡ್ಡ ಆರ್ಥಿಕ ಹೊಡೆತವಾಗಿದೆ. ಸಾಲ ಮಾಡಿ ಬೆಳೆದ ಬೆಳೆಗಳಿಗೆ ಇಷ್ಟೊಂದು ಕಡಿಮೆ ದರ ಸಿಗುತ್ತಿರುವುದು ಅನ್ನದಾತರ ಸಂಕಷ್ಟವನ್ನು ಹೆಚ್ಚಿಸಿದೆ.
ಕೋಟುಮಚಗಿ ಗ್ರಾಮದ ಮೂಲಕ ಸಾಗುವ ಗದಗ–ಬಾಗಲಕೋಟೆ ರಾಜ್ಯ ಹೆದ್ದಾರಿಯನ್ನು ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಬಂದ್ ಮಾಡಲಾಗಿದ್ದು, ನೂರಾರು ರೈತರು ಮಹಿಳೆಯರೊಂದಿಗೆ ಸೇರಿ ಧರಣಿಯಲ್ಲಿ ಪಾಲ್ಗೊಂಡರು. ನಡುರಸ್ತೆಯಲ್ಲೇ ಅಡುಗೆ ಮಾಡುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಆಗ್ರಹ:
ಈರುಳ್ಳಿಗೆ ₹5,000 ಕ್ವಿಂಟಲ್ ಬೆಂಬಲ ಬೆಲೆ ಘೋಷಿಸಬೇಕು
ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ₹2,400 ಬೆಲೆ ಪರ್ಯಾಯವಲ್ಲ; ಅದನ್ನು ₹2,800 ಗೆ ಹೆಚ್ಚಿಸಬೇಕು
ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯಬೇಕು
ಸ್ಥಳಕ್ಕೆ ಎಸಿ ಗಂಗಪ್ಪ ಹಾಗೂ ತಹಶಿಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ನಡೆಸಿದರು. ಸರ್ಕಾರಕ್ಕೆ ರೈತರ ಬೇಡಿಕೆಗಳನ್ನು ವರದಿ ಮಾಡುವುದಾಗಿ ಭರವಸೆ ನೀಡಿದರೂ, ರೈತರು ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಸತತ ಏಳು ಗಂಟೆಗಳ ಕಾಲ ಹೆದ್ದಾರಿ ಬಂದ್ ಆಗಿದ್ದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ನಂತರ ಅಧಿಕಾರಿಗಳ ಮನವಿಗೆ ತಾತ್ಕಾಲಿಕವಾಗಿ ಒಪ್ಪಿದ ರೈತರು ಎರಡು ದಿನ ಗಡುವು ನೀಡಿ ಪ್ರತಿಭಟನೆಯನ್ನು ಹಿಂಪಡೆದರು. ಆದರೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದರು.
ಗದಗ ಜಿಲ್ಲೆಯ ಅನ್ನದಾತರು ಬೆಲೆ ಕುಸಿತದಿಂದ ಸಂಕಷ್ಟಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP