ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ
ಚಿಕ್ಕಬಳ್ಳಾಪುರ, 18 ನವೆಂಬರ್ (ಹಿ.ಸ.) ಆ್ಯಂಕರ್: ಹೆಬ್ಬಾಳ-ನಾಗಾವರ ವ್ಯಾಲಿ ಮತ್ತು ಕೋರಮಂಗಲ- ಚೆಲ್ಲಗಟ್ಟ ವ್ಯಾಲಿ ನೀರಾವರಿ ಯೋಜನೆಗಳಿಂದ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಸಿರುವ ಕಾರ್ಯವು ಏಷ್ಯಾ ಖಂಡದಲ್ಲೇ ಅತ್ಯುತ
Bosraju


ಚಿಕ್ಕಬಳ್ಳಾಪುರ, 18 ನವೆಂಬರ್ (ಹಿ.ಸ.)

ಆ್ಯಂಕರ್:

ಹೆಬ್ಬಾಳ-ನಾಗಾವರ ವ್ಯಾಲಿ ಮತ್ತು ಕೋರಮಂಗಲ- ಚೆಲ್ಲಗಟ್ಟ ವ್ಯಾಲಿ ನೀರಾವರಿ ಯೋಜನೆಗಳಿಂದ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಸಿರುವ ಕಾರ್ಯವು ಏಷ್ಯಾ ಖಂಡದಲ್ಲೇ ಅತ್ಯುತ್ತಮವಾಗಿದೆ ಹಾಗೂ ಅಗ್ರಸ್ಥಾನವನ್ನು ಪಡೆದಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅವರು ತಿಳಿಸಿದರು.

ಬಾಗೇಪಲ್ಲಿ ತಾಲೂಕಿನ ಆಚೆಪಲ್ಲಿ ಕೆರೆ ಅಂಗಳದಲ್ಲಿ ಮಂಗಳವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಬಾಗೇಪಲ್ಲಿ ತಾಲೂಕು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹೆಚ್ ಎನ್ ವ್ಯಾಲಿ ನೀರಾವರಿ ಯೋಜನೆಯಡಿ ಎರಡನೇ ಹಂತದಲ್ಲಿ ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಹೆಚ್ ಎನ್ ವ್ಯಾಲಿ ನೀರಾವರಿ ಯೋಜನೆ ಮೂಲಕ ಸಂಸ್ಕರಿಸಿ ಮೊದಲ ಹಂತದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 65 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಅದರ ಮುಂದುವರಿದ ಭಾಗವಾಗಿ ಎರಡನೇ ಹಂತದಲ್ಲಿ ಬಾಗೇಪಲ್ಲಿನ ತಾಲೂಕಿನ 24 ಕೆರೆಗಳಿಗೆ ನೀರು ಹರಿಸುತ್ತಿರುವ ಕಾರ್ಯವು ಇಂದು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ನಗರದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುತ್ತಿರುವ ಕರ್ನಾಟಕ ಭಾಗದ ಕ್ರಮವನ್ನು ವಿಶ್ವಸಂಸ್ಥೆಯ ತಂಡ,ಕೇಂದ್ರ ಸರ್ಕಾರದ ನೀತಿ ಆಯೋಗದ ಪ್ರತಿನಿಧಿಗಳು,ವಿದೇಶದ ಪ್ರತಿನಿಧಿಗಳು, ಅನ್ಯ ರಾಜ್ಯಗಳ ಉನ್ನತ ಅಧಿಕಾರಿಗಳು ಇಲ್ಲಿಗೆ ಬಂದು ವೀಕ್ಷಿಸಿ ಶ್ಲಾಘನೆ ಮಾಡಿದ್ದಾರೆ. ಹೆಚ್ ಎನ್ ವ್ಯಾಲಿ ನೀರಾವರಿ ಯೋಜನೆಯಿಂದ 19.5 ಟಿಎಂಸಿ ನೀರು ಲಭ್ಯವಾಗಲಿದ್ದು ಈ ನೀರನ್ನು ಅಂತರ್ಜಲ ವೃದ್ಧಿಸುವ ಏಕೈಕ ಉದ್ದೇಶಕ್ಕೆ ಮಾತ್ರ ಸರ್ಕಾರ ಯೋಜನೆ ರೂಪಿಸಿದೆ. ರೈತರು ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ನೇರವಾಗಿ ಬಳಸಿಕೊಳ್ಳುವುದು, ಜಾನುವಾರುಗಳಿಗೆ ಕುಡಿಯಲು ಅಥವಾ ಜನರ ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡಬಾರದು ಎಂದು ಸಚಿವರು ಮನವಿ ಮಾಡಿದರು.

ಈಗಾಗಲೇ ಕೆ ಸಿ ವ್ಯಾಲಿ ಯಿಂದ 143 ಕೆರೆಗಳಿಗೆ, ಹೆಚ್ ಎನ್ ವ್ಯಾಲಿ ಯಿಂದ 65 ಕೆರೆಗಳಿಗೆ ನೀರು ಹರಿಸುವ ಮೂಲಕ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಂತರ್ಜಲವನ್ನು ವೃದ್ಧಿಸಿದೆ. ಈ ಯೋಜನೆಗಳು ಆರಂಭವಾಗುವುದಕ್ಕೂ ಮುನ್ನ ಈ ಭಾಗದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವು 1200 ಅಡಿಗೆ ತಲುಪಿತ್ತು, ಪ್ರಸ್ತುತ 300 ಅಡಿಗಳಿಗೆ ವೃದ್ಧಿಸಿದೆ.ಆದ್ದರಿಂದ ಬೆಂಗಳೂರಿಗೆ ನಗರದ ತ್ಯಾಜ್ಯ ನೀರನ್ನು ಇನ್ನಷ್ಟು ಕೆರೆಗಳಿಗೆ ಸಂಸ್ಕರಿಸಿ ತುಂಬಿಸಲು ವೃಷಭಾವತಿ ನೀರಾವರಿ ಯೋಜನೆಯಡಿ ಮೂರನೇ ಹಂತದ ಕಾಮಗಾರಿಗಳನ್ನು ಕೈಗೊಳ್ಳಲು 650 ಕೋಟಿ ಅನುದಾನವನ್ನು ನೀಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಸಹ ಯಶಸ್ವಿಯಾಗಿಸಿ ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತಷ್ಟು ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಅವರು ಮಾತನಾಡಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕಡಿಮೆ ಮಳೆಯ ಪ್ರಮಾಣದಿಂದ ಈ ಭಾಗದ ಬಹುತೇಕ ಕೆರೆಗಳು ತುಂಬುತ್ತಿಲ್ಲ ಆದ್ದರಿಂದ ಈ ಭಾಗದಲ್ಲಿ ಅಂತರ್ಜಲವನ್ನು ವೃದ್ಧಿಸಲು ಕೆ ಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯ ಎಲ್ಲ ಕೆರೆಗಳನ್ನು ಹಂತ ಹಂತವಾಗಿ ತುಂಬಿಸುವ ಪ್ರಯತ್ನವನ್ನು ಸರ್ಕಾರ ನಿರಂತರವಾಗಿ ಮಾಡುತ್ತಿದೆ. ಈ ನೀರಾವರಿ ಯೋಜನೆಗಳು ಈ ಭಾಗದಲ್ಲಿ ರೈತರಿಗೆ ಬಹಳ ಉಪಯುಕ್ತವಾಗಿವೆ. ಕೆ ಸಿ ವ್ಯಾಲಿ ಹೆಚ್ ಎನ್ ವ್ಯಾಲಿ ಯೋಜನೆಗಳು ಯಶಸ್ವಿಯಾಗಲು ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಅವರ ದೂರದೃಷ್ಟಿಯೇ ಪ್ರಮುಖ ಕಾರಣವಾಗಿದೆ. ಈ ಕಾರ್ಯಕ್ಕೆ ಸಹಕಾರ ನೀಡಿದಂತಹ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಣ್ಣ ನೀರಾವರಿ ಸಚಿವರಿಗೆ ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ. ಬಾಗೇಪಲ್ಲಿ ಭಾಗದಲ್ಲಿ ಹೆಚ್ ಎನ್ ವ್ಯಾಲಿ ನೀರು ಬರಲು ಅವಿರತವಾಗಿ ಶ್ರಮಿಸಿದ ಬಾಗೇಪಲ್ಲಿ ಶಾಸಕರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಅವರು ಮಾತನಾಡಿ ಹೆಚ್ ಎನ್ ವ್ಯಾಲಿ ನೀರು ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಪ್ರಸ್ತುತ ತುಂಬಿಸುತ್ತಿರುವುದು ನನ್ನ ಪಾಲಿಗೆ ಅತಿ ಸಂತೋಷದ ಕ್ಷಣವಾಗಿದೆ, ಇನ್ನು ಮುಂದೆ ಈ ಕೆರೆಗಳಲ್ಲಿ ನಿರಂತರವಾಗಿ ನೀರು ಇರುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಚೇಳೂರು ತಾಲೂಕಿನ ಭಾಗದ ಕೆರೆಗಳಿಗೂ ಸಹ ಹೆಚ್ ಎನ್ ವ್ಯಾಲಿ ನೀರನ್ನು ಹರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ತರಲಾಗುವುದು.ಅಲ್ಲದೆ ಈ ಭಾಗದಲ್ಲಿ ಸುಮಾರು 200 ಕೋಟಿ ವೆಚ್ಚದಲ್ಲಿ ಗಂಟಲು ಮಲ್ಲಮ್ಮ ಡ್ಯಾಮ್ ನಿರ್ಮಾಣ ಮಾಡುವ ಕಾಮಗಾರಿಗೆ ಸದ್ಯದಲ್ಲೇ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ ಒಟ್ಟಾರೆ ಈ ಭಾಗವು ಸಸ್ಯ ಶಾಮಲವಾಗುವ ರೀತಿಯಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನರೇಂದ್ರ, ಯಲ್ಲಂಪಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸರಸ್ವತಮ್ಮ ಅಶ್ವತ್ಥಪ್ಪ, ತಹಸೀಲ್ದಾರ್ ಮನಿಷಾ ಪತ್ರಿ, ದಕ್ಷಿಣ ವಲಯದ ಸಣ್ಣ ನೀರಾವರಿ ಮುಖ್ಯ ಇಂಜಿನಿಯರ್ ಬಿ ಹರಿ, ಅಧಿಕ್ಷಕ ಇಂಜಿನಿಯರ್ ಕೆ ಗುರು, ಕಾರ್ಯಪಾಲಕ ಇಂಜಿನಿಯರ್ ವಿಷ್ಣು ಕಾಮತ್, ಕೆ.ಡಿ.ಪಿ ಸದಸ್ಯ ಪಿ ಮಂಜುನಾಥ್, ಮಾಜಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷ ಕೆ.ವಿ ಪೂಜೆಪ್ಪ, ಕಾರ್ಯಪಾಲಕ ಅಭಿಯಂತರ ಜಿ ವಿ ರಮೇಶ್ ಹಾಗೂ ಗ್ರಾಮಪಂಚಾಯಿತಿಯ ಸದಸ್ಯರರು, ಸಾರ್ವಜನಿಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande