


ಕೊಪ್ಪಳ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಅರ್ಹ ಮತ್ತು ಆಸಕ್ತ ರೈತರು ಬೆಳೆ ವಿಮೆ ಮಾಡಿಸಲು ಅಗತ್ಯ ಪ್ರಚಾರ ಕೈಗೊಂಡು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ (ಪಿ.ಎಂ.ಎಫ್.ಬಿ.ವೈ) ಹಿಂಗಾರು, ಬೇಸಿಗೆ ಹಂಗಾಮಿನ ನೋದಾವಣೆ ಕುರಿತಂತೆ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
2025-26ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಅಧಿಸೂಚಿತ ಬೆಳೆಗಳಿಗೆ ವಿಮಾ ರಕ್ಷಣೆ ನೀಡುವುದು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಮುಖ್ಯ ಉದ್ದೇಶವಾಗಿದೆ. ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರಿಗೆ ಎಲ್ಲಾ ಅನುಸೂಚಿತ ಬೆಳೆಗಳು ಮತ್ತು ಘಟಕಗಳ ಬಗ್ಗೆ ಬ್ಯಾಂಕುಗಳು, ರೈತ ಸಂಪರ್ಕ ಕೇಂದ್ರಗಳು ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳ ಸೂಚನಾ ಫಲಕಗಳ ಮೇಲೆ ಪ್ರಕಟಿಸಿ ವ್ಯಾಪಕ ಪ್ರಚಾರ ನಡೆಸಿ ರೈತರಿಗೆ ಯೋಜನೆಯ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಯೋಜನೆಯ ಮಾರ್ಗಸೂಚಿಯನ್ವಯ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ನೀರಾವರಿ ಮತ್ತು ಒಣಬೇಸಾಯ ಪ್ರದೇಶದ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಬೆಳೆವಿಮೆ ನೋಂದಾವಣೆ ವೇಳೆ ರೈತರ ಆಧಾರ್ ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಪ್ರದರ್ಶಿಸಿ ಬೆಳೆವಿಮೆಯ ಪ್ರಚಾರವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಹೇಳಿದರು.
ಕೃಷಿ ಇಲಾಖೆ ಉಪನಿರ್ದೇಶಕ ಎಲ್. ಸಿದ್ದೇಶ್ವರ ಅವರು ಮಾತನಾಡಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರಿಗೆ ನೋಂದಾಯಿಸಲು ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯಿತಿ ಮತ್ತು ಇತರೆ ಬೆಳೆಗಳಿಗೆ ಹೋಬಳಿಯಲ್ಲಿ ವಿಮಾ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು.
ಬೆಳೆ ವಿಮೆಗೆ ನೋಂದಾಯಿಸಲು ರೈತರು ಕಡ್ಡಾಯವಾಗಿ `ಫ್ರೂಟ್ಸ್ ಐಡಿ' ಹೊಂದಿರಬೇಕು. ಬೇಸಿಗೆ ಹಂಗಾಮಿನ ನೀರಾವರಿ ಭತ್ತ ಬೆಳೆಗೆ `ಯಸ್ ಟಕ್' (YES-TECH) ತಂತ್ರಜ್ಞಾನ ಬಳಸಿ ಇಳುವರಿ ಅಂದಾಜು ಮಾಡಲಾಗುವುದು. ಬೆಳೆ ಸಾಲ ಪಡೆದ ರೈತರು ಬ್ಯಾಂಕುಗಳಿಂದ ಕಡ್ಡಾಯವಾಗಿ ನೋಂದಣಿಯಾಗುತ್ತಾರೆ. ಭಾಗವಹಿಸಲು ಇಚ್ಚೆ ಪಡದಿದ್ದಲ್ಲಿ ನೋಂದಣಿ ಕೊನೆಯ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಬ್ಯಾಂಕಿಗೆ ಲಿಖಿತ ಪತ್ರ ನೀಡಬೇಕು. ಬೆಳೆ ಸಾಲ ಪಡೆಯದ ರೈತರ ನೋಂದಣಿ ಸ್ವಯಂಪ್ರೇರಿತವಾಗಿದ್ದು, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬಹುದು ಎಂದರು.
ಹಿಂಗಾರು ಬೆಳೆಗಳಿಗೆ ರೈತರು ಪಾವತಿಸಬೇಕಾದ ಕಂತು (ಪ್ರೇಮಿಯಂ) ವಿಮಾ ಮೊತ್ತದ ಶೇ. 1.5 ವಿಮಾ ಕಂತು ಆಗಿದ್ದು, ರೈತರ ವಂತಿಗೆಯ ನಂತರ, ಉಳಿದ ವಿಮಾ ಕಂತನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಭರಿಸುತ್ತವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಕಾಶ ದೇಶಪಾಂಡೆ, ಸೇರಿದಂತೆ ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಸಹಕಾರ ಇಲಾಖೆಯ ಉಪನಿಬಂಧಕರು, ಲೀಡ್ ಬ್ಯಾಂಕ್ ಸಿಬ್ಬಂದಿ, ವಿಮಾ ಕಂಪನಿಯ ಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್