
ಕೋಲಾರ, ೧೮ ನವೆಂಬರ್ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೋಲಾರ ಘಟಕ ಭಾನುವಾರ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ವ್ಯವಸ್ಥಾಪಕಿ ಶಿರೀನ್ ತಾಜ್ ಅವರ ನೇತೃತ್ವದಲ್ಲಿ ಕೋಲಾರ ನಗರದ ಇಮ್ಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿಗಮದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಘಟಕದಡಿ ಲಭ್ಯವಿರುವ ವಿವಿಧ ಯೋಜನೆಗಳಾದಂತಹ ಅರಿವು ಶೈಕ್ಷಣಿಕ ಸಾಲ, ಶ್ರಮಶಕ್ತಿ, ಶ್ರಮಶಕ್ತಿ ವಿಶೇಷ ಮಹಿಳಾ, ವೃತ್ತಿಪೋತ್ಸಹ, ಸ್ವಾವಲಂಬಿ ಸಾರಥಿ, ವಿದೇಶಿ ವಿದ್ಯಾಭ್ಯಾಸ ಸಾಲ, ೨೦ ಲಕ್ಷದವರೆಗೆ ನೇರ ಸಾಲ, ಗಂಗಾ ಕಲ್ಯಾಣ ಯೋಜನೆ, ಸಮುದಾಯ ಆಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ ಹಾಗೂ ಸ್ವಸಹಾಯ ಸಂಘ ಮಹಿಳೆಯರಿಗೆ ಸಬಲೀಕರಣಕ್ಕೆ ನೀಡಲಾಗುವ ಸಹಾಯಧನ ಸೇರಿದಂತೆ ಅನೇಕ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.
ಶಿರೀನ್ ತಾಜ್ ಅವರು ಮಾತನಾಡಿ ಜಿಲ್ಲೆಯಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಪ್ರತಿಯೊಂದು ಕುಟುಂಬಕ್ಕೂ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ತಲುಪುವುದು ನಮ್ಮ ಪ್ರಮುಖ ಗುರಿ. ಶಿಕ್ಷಣ, ಉದ್ಯಮ, ಸ್ವಾವಲಂಬನೆ ಮುಂತಾದ ತುತ್ತತುದಿ ಮಟ್ಟದ ನೆರವುಗಳು ಈಗ ನಿಗಮದ ಮೂಲಕ ಸುಲಭವಾಗಿ ಲಭ್ಯ. ಜನರು ಈ ಅವಕಾಶಗಳನ್ನು ತಲುಪಿಕೊಳ್ಳುವಂತೆ ಮಾಡುವುದೇ ನಮ್ಮ ಈ ಜಾಗೃತಿ ಕಾರ್ಯಕ್ರಮಗಳ ಉದ್ದೇಶ, ಎಂದರು.
ಅವರು ಮುಂದುವರಿದು, ಅರ್ಜಿಸಲ್ಲಿಕೆ ವಿಧಾನ, ಅಗತ್ಯ ದಾಖಲೆಗಳು, ಅರ್ಹತಾ ಮಾನದಂಡಗಳು ಹಾಗೂ ಆನ್‌ಲೈನ್ ಮೂಲಕ ಲಭ್ಯವಿರುವ ಸೇವೆಗಳ ಕುರಿತು ಭಾಗವಹಿಸಿರುವವರಿಗೆ ಮಾಹಿತಿ ನೀಡಿದರು. ಪ್ರತಿ ಅರ್ಹ ಕುಟುಂಬವೂ ಕನಿಷ್ಠ ಒಂದು ಯೋಜನೆಯಾದರೂ ಪಡೆಯಬೇಕು ಎಂಬ ಗುರಿಯೊಂದಿಗೆ ತಾಲ್ಲೂಕು ಮಟ್ಟದಲ್ಲೂ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿದ್ದೇವೆ, ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರಿಶ್ಚಿಯನ್ ಸಂಘಟನೆಗಳ ಪ್ರತಿನಿಧಿಗಳು, ಯುವಕರು, ಮಹಿಳಾ ಗುಂಪುಗಳು ಹಾಗೂ ಹಿರಿಯರು ತಮ್ಮ ಪ್ರಶ್ನೆಗಳನ್ನು ಕೇಳಿ ಸ್ಪಷ್ಟನೆ ಪಡೆದರು.
ಜಿಲ್ಲಾ ನಿಗಮದ ಅಧಿಕಾರಿಗಳು ಮಾತನಾಡಿ, ಸಮುದಾಯದ ಒಳಗಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಆದ್ಯತೆಯ ಆಧಾರದ ಮೇಲೆ ಸರ್ಕಾರದ ಪ್ರಯೋಜನಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಚರ್ಚ್ ನಿರ್ವಾಹಕ ಸಮಿತಿ, ಈ ಮಹತ್ವದ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಧನ್ಯವಾದ ತಿಳಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಯೋಜನೆಗಳನ್ನು ಗ್ರಾಮ–ನಗರ ಮಟ್ಟದಲ್ಲಿ ಪರಿಚಯಿಸುವಂತೆ ವಿನಂತಿಸಿತು.
ಚಿತ್ರ : ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್