
ಗದಗ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಸರ್ಕಾರ ಸದಾ ರೈತರ ಪರವಾಗಿದೆ. ಹೆಸರುಕಾಳು ಬೆಂಬಲ ಬೆಲೆಯಲ್ಲಿ ಖರೀದಿಸುವ ಸಂಬಂಧ ಯಾವುದೇ ಕಾರಣಕ್ಕೂ ರೈತರಿಗೆ ಹಾನಿಯಾಗಲು ಬಿಡುವುದಿಲ್ಲ” ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಹೇಳಿದರು.
ಗದಗ ತಾಲೂಕಿನ ಬಿಂಕದಕಟ್ಟಿಯ ಗ್ರಾಮ ಪಂಚಾಯತ ಭವನದಲ್ಲಿ ಹೆಸರುಕಾಳು ಬೆಂಬಲ ಬೆಲೆ ಖರೀದಿ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಹೆಸರುಕಾಳು ಖರೀದಿ ಪ್ರಕ್ರಿಯೆಯಲ್ಲಿ ಉದ್ಭವಿಸಿರುವ ತಾಂತ್ರಿಕ ಮತ್ತು ಗುಣಮಟ್ಟದ ಅಂಶಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ಏರ್ಪಡಿಸಲಾಗಿತ್ತು.
ರೈತರ ಆಕ್ಷೇಪಣೆ ಹಾಗೂ ಬೇಡಿಕೆಗಳನ್ನು ಗಮನದಿಂದ ಆಲಿಸಿದ ಸಚಿವ ಡಾ. ಎಚ್.ಕೆ. ಪಾಟೀಲ, ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೃಷಿಕರಿಗೆ ನ್ಯಾಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
“ರೈತರ ಪರಿಶ್ರಮ ವ್ಯರ್ಥವಾಗಬಾರದು, ಬೆಂಬಲ ಬೆಲೆ ಸೌಲಭ್ಯ ತಲುಪುವಂತೆ ಅಗತ್ಯ ಬದಲಾವಣೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ” ಎಂದು ಸಚಿವ ಎಚ್ ಕೆ ಪಾಟೀಲ ಹೇಳಿದರು.
ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಯಡಿ ಈವರೆಗೆ ಗದಗ ಜಿಲ್ಲೆಯಲ್ಲಿ ಕೇವಲ 440 ಕ್ವಿಂಟಲ್ ಹೆಸರುಕಾಳುಗಳನ್ನು ಮಾತ್ರ ಖರೀದಿಸಲಾಗಿದೆ ಎಂದು ಮಾರ್ಕೆಟಿಂಗ್ ಫೆಡರೇಶನ್ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಸರ್ಕಾರದ ಮಾರ್ಗಸೂಚಿ ಪ್ರಕಾರ ಹೆಚ್ಚಿನ ಹೆಸರುಕಾಳು ಬೆಳೆ ಗುಣಮಟ್ಟದ ಆಧಾರದ ಮೇಲೆ ‘ರಿಜಕ್ಟ್’ ಆಗುತ್ತಿರುವುದನ್ನು ಅವರು ತಿಳಿಸಿದರು.
ಹೆಸರುಕಾಳು ಬೆಳೆ ಹಾನಿಗೊಳಗಾಗಿಲ್ಲ, ಕೇವಲ ಸ್ವಲ್ಪ ಕಪ್ಪು ಚುಕ್ಕೆಗಳು ಕಂಡುಬರುವ ಮಟ್ಟಿಗೆ ಮಾತ್ರ ವ್ಯತ್ಯಾಸವಿದ್ದು, ಇದಕ್ಕೂ ವಾತಾವರಣದ ವೈಪರೀತ್ಯಗಳು ಕಾರಣವೆಂದು ರೈತ ಮುಖಂಡರು ವಿವರಿಸಿದರು. ಇಂತಹ ಪರಿಸ್ಥಿತಿಯನ್ನು ಪರಿಗಣಿಸಿ, ಸರ್ಕಾರವು ಮಾರ್ಗಸೂಚಿಗಳನ್ನು ಸಡಿಲಗೊಳಿಸಿ ರೈತರಿಂದ ಹೆಸರುಕಾಳು ಖರೀದಿ ಮಾಡಿ ರೈತರ ಆರ್ಥಿಕ ಹಾನಿಯನ್ನು ತಪ್ಪಿಸಬೇಕೆಂದು ಅವರು ಸಚಿವರ ಗಮನಕ್ಕೆ ತಂದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಮಾತನಾಡಿ, ರೈತರ ಸಮಸ್ಯೆಗೆ ಜಿಲ್ಲಾಡಳಿತ ಖಂಡಿತ ಸ್ಮದನೆ ಮಾಡಲಾದೆ. ರೈತರು ಬೆಳೆದ ಹೆಸರು ಖರೀದಿಗೆ ಇರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಅವರ ಸೂಚನೆಯಂತೆ ಕ್ರಮ ವಹಿಸಿ ಪ್ರಯತ್ನಿಸಲಾಗುವುದು. ರೈತರ ಶ್ರಮಕ್ಕೆ ಹಾನಿಯಾಗದಂತೆ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತದೆ ಎಂದರು.
ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ 1.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆ ಮಾಡಲಾಗಿತ್ತು. ಅದರಲ್ಲಿ 96043 ಹೆಕ್ಟೇರ್ ಪ್ರದೇಶದ ಹೆಸರುಕಾಳು ಹಾನಿಯಾಗಿದೆ. ಸರ್ಕಾರ ಹೆಸರುಕಾಳು ಖರೀದಿ ಗಾಗಿ ಪ್ರತಿ ಕ್ವಿಂಟಲ್ ಕಾಳಿಗೆ 8768 ರೂ ಗಳನ್ನು ನೀಗದಿಪಡಿಸಿದೆ. ಜಿಲ್ಲೆಯಲ್ಲಿ ಒಟ್ಟು 57 ಕಡೆಗಳಲ್ಲಿ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಸಭೆಯಲ್ಲಿ ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಆನಂದಸ್ವಾಮಿ ಗಡ್ಡದ್ದೇವರ ಮಠ, ರವಿ ಮೂಲಿಮನಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಾಪಂ ಇಓ ಮಲ್ಲಯ್ಯ ಕೆ, ತಹಶಿಲ್ದಾರರ ಶ್ರೀನಿವಾಸ್ ಮೂರ್ತಿ, ಕೃಷಿ ಮಾರುಕಟ್ಟೆ ಸಮಿತಿ ಸಹಾಯಕ ನಿರ್ದೇಶಕರು ಸೇರಿದಂತೆ ಇಲಾಖೆ ಅಧಿಕಾರಿಗಳು, ರೈತ ಮುಖಂಡರಾದ ಅಪ್ಪಣ್ಣ ಇನಾಮತಿ, ಸಿ.ಬಿ. ದೊಡ್ಡಗೌಡ್ರೇ, ಬಿ.ಆರ್. ದೇವರೆಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗಪ್ಪ ಪರಪ್ಪನವರ, ಉಪಾಧ್ಯಕ್ಷೆ ದ್ಯಾಮವ್ವ ಆರಟ್ಟಿ, ಸದಸ್ಯರಾದ ತರದರೆಡ್ಡಿ ರಂಗಪ್ಪನವರ, ಪತ್ತೆಸಾಬ್ ನದಾಫ್, ವೆಂಕಟೇಶ್ ಕುನಿ, ಮಂಜುನಾಥ ಮಕಳಿ, ಭೀಮವ್ವ ಬೇವಿನಕಟ್ಟಿ, ಲಕ್ಷ್ಮಿ ಮೂಲಿಮನಿ, ತುಳಸ ತಿಮ್ಮನ ಗೌಡ್ರ, ಜೈಬುನಬಿ ಸೋನೆಖಾನವರ, ಅಶೋಕ ಕರೂರ, ದೇವೇಂದ್ರ ಗೌಡ್ರು, ಕರಿಗೌಡ್ರ, ಗಾಯತ್ರಿ ಖಾನಾಪುರ, ಗಂಗವ್ವ ತಡಿಸಿ ಸೇರಿದಂತೆ ಹಲವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP