
ಬೆಂಗಳೂರು, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ- 2016 ರ ವಿವಿಧ ನಿಬಂಧನೆಗಳ ಅನುಷ್ಠಾನದ ನೈಜ ಸ್ಥಿತಿಯನ್ನು ವಿವರಿಸುವ ಸಮಗ್ರ ವರದಿಯನ್ನು ಫೆಬ್ರವರಿ 4ನೇ ತಾರೀಕಿನೊಳಗಾಗಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವಿಧಾನ ಪರಿಷತ್ತಿನ ಸದಸ್ಯರಾದ ವೈ.ಎಂ. ಸತೀಶ್ ಮತ್ತು ಅವರ ಮಕ್ಕಳಾದ ವೈ. ಕಾರ್ತಿಕ್ ಹಾಗೂ ವೈ. ಕೌಶಿಕ್ ಅವರು ಭಾರತೀಯ ಸಂವಿಧಾನದ ಆರ್ಟಿಕಲ್ 226ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ನಲ್ಲಿ ದಾಖಲಿಸಿದ್ದಾರೆ.
ಪಿಐಎಲ್ ನಲ್ಲಿ, ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ- 2016 ರ ಅನುಷ್ಠಾನದ ಕುರಿತು ಸಮಗ್ರ ಮಾಹಿತಿ ಕೋರಿ, ಅಧಿಕಾರಿಗಳು ಅಂಗವಿಕಲರ ಸಮೀಕ್ಷೆಯನ್ನು ನಡೆಸುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕದಲ್ಲಿ ಇರುವ ಅಂಗವಿಕಲರ ಪೈಕಿ ಸುಮಾರು 15% ಜನರಿಗೆ ವಿಶಿಷ್ಟ ಅಂಗವಿಕಲ ಗುರುತಿನ ಚೀಟಿಗಳನ್ನು ನೀಡಿಲ್ಲ.
ಅಲ್ಲದೇ, ವಿಶೇಷ ಚೇತನರ ರಿಹ್ಯಾಬಿಲಿಟೇಷನ್ ಕೌನ್ಸಿಲ್ ಆಫ್ ಇಂಡಿಯಾ ಕಾಯ್ದೆ-1992ರ ಅನುಷ್ಠಾನ, ವಿಶೇಷ ಚೇತನರ ಶಿಕ್ಷಕ ತರಬೇತಿ ಕೇಂದ್ರಗಳನ್ನು ತೆರೆಯುವುದು, ವಿಶೇಷ ಚೇತನರಿಗೆ ಕೌಶಲ್ಯ ತರಬೇತಿ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿ ಶೇ.4 ರಷ್ಟು ಕಡ್ಡಾಯವಾಗಿ ಮೀಸಲಾತಿ, ವಿಶೇಷ ಚೇತನರ ಹುದ್ದೆಗಳನ್ನು ಅವರಿಗೇ ಕಾಯ್ದಿರಿಸಬೇಕು. ವಿಶೇಷ ಚೇತನರ ಮಾಶಾಸನವನ್ನು 10,000 ರೂಪಾಯಿಗೆ ಹೆಚ್ಚಿಸಿ, ಮಾಶಾಸನಕ್ಕೆ ಅರ್ಜಿ ಸಲ್ಲಿಸಲು ಇರುವ ಆದಾಯದ ಮಿತಿಯನ್ನು ರದ್ದು ಮಾಡಬೇಕು. ವಿಶೇಷ ಚೇತನರ ಆರೈಕೆದಾರರಿಗೆ - ಪೋಷಕರ ಮಾಶಾಸನ ಹೆಚ್ಚಿಸಬೇಕು. ರಾಜ್ಯ ಸರ್ಕಾರ ವಿಶೇಷ ಚೇತನರಿಗಾಗಿ ಪ್ರತ್ಯೇಕವಾಗಿ ವಿಶೇಷ ನಿಧಿಯನ್ನು ರಚಿಸಬೇಕು. ಪ್ರತಿ ಇಲಾಖೆಯ ಒಟ್ಟು ಅನುದಾನದಲ್ಲಿ ಶೇ. 5ರಷ್ಟನ್ನು ಕಡ್ಡಾಯವಾಗಿ ವಿಶೇಷ ಚೇತನರಿಗೆ ಕಾಯ್ದಿರಿಸಬೇಕು. ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು, ಯಂತ್ರಗಳನ್ನು - ಉಪಕರಣಗಳನ್ನು ಖರೀದಿಸಲು ಅನುದಾನ ಹೆಚ್ಚಿಸಬೇಕು. ಸಾಮಾನ್ಯ ಶಾಲೆಗಳಲ್ಲಿ ವಿಶೇಷ ಚೇತನರಿಗೆ ಪ್ರವೇಶ ನೀಡಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.
ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯನ್ನು ನಡೆಸಿದ ಹೈಕೋಟ್೯ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠವು, ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ- 2016 ಅನುಷ್ಠಾನದಲ್ಲಿ ಸೆಕ್ಷನ್ 17 ರ ಆದೇಶವನ್ನು ಪಾಲಿಸದಿರುವ ಆರೋಪದ ಮೇಲೆ ಕರ್ನಾಟಕ ಸರ್ಕಾರ ಮತ್ತು ಅಂಗವಿಕಲರ ಆಯುಕ್ತರ ಕಚೇರಿಗೆ ನೋಟಿಸ್ ಜಾರಿ ಮಾಡಿ ವರದಿಯಲ್ಲಿ ಅರ್ಜಿದಾರರು ಕೇಳಿರುವ ಸಮಗ್ರ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್