


ಕೊಪ್ಪಳ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ನಗರಸಭೆ ಮುಂದೆ ನಡೆಯುತ್ತಿರುವ 18ನೇ ದಿನದ ಬಲ್ಡೋಟಾ (ಬಿಎಸ್ಪಿಎಲ್) ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು ಒತ್ತಾಯಿಸಿ ನಡೆಯುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಲು ಗದುಗಿನ ತೋಂಟದ ಶ್ರೀಗಳು ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಆಗಮಿಸುತ್ತಿದ್ದಾರೆ.
ಗದಗ ಜಿಲ್ಲೆಗೆ ಬಂದು ಅಪ್ಪಳಿಸಿದ್ದ ಕೋರಿಯಾ ಮೂಲದ ಫೆÇೀಸ್ಕೋ ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಕಪ್ಪತ್ತಗುಡ್ಡ ಹಾಗೂ ಹಳ್ಳಿಗುಡಿ, ಹಳ್ಳಿಕೇರಿ, ಬರದೂರು ಗ್ರಾಮಗಳ 4600 ಎಕರೆ ಕೃಷಿ ಭೂಮಿ ಉಳಿಸಲು ನೇತೃತ್ವವಹಿಸಿ ಹೋರಾಡಿ ಜಯಿಸಿದ ಕೀರ್ತಿ ತೋಂಟದ ಶ್ರೀಗಳು ಮತ್ತು ಅವರ ಮಠಕ್ಕೆ ಸಲ್ಲುತ್ತದೆ. ಈ ಧರ್ಮಗುರುಗಳು ಕೊಪ್ಪಳ ಜನರ ಹೋರಾಟಕ್ಕೆ ಬೆಂಬಲ ನೀಡಲು ಆಗಮಿಸುತ್ತಿರುವುದಕ್ಕೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಹರ್ಷಗೊಂಡು ಸ್ವಾಗತಿಸುತ್ತದೆ ಎಂದು ಅಲ್ಲಮಪ್ರಭು ಬೆಟ್ಟದೂರ ಅವರು ತಿಳಿಸಿದ್ದಾರೆ.
ತೋಂಟದ ಶ್ರೀಗಳು ನಾಳೆ ಬೆಳಿಗ್ಗೆ ಗಿಣಿಗೇರಿ, ಅಲ್ಲಾನಗರ, ಕನಕಾಪುರ, ಹಿರೇಬಗನಾಳ, ಕಾಸನಕಂಡಿ, ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ ಗ್ರಾಮಗಳಲ್ಲಿ ಜನರನ್ನು ಭೇಟಿ ಮಾಡಿ ಮಧ್ಯಾಹ್ನ 12 ಗಂಟೆಗೆ ಧರಣಿ ಸ್ಥಳಕ್ಕೆ ಬಂದು ಬೆಂಬಲ ಘೋಷಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್