
ವಿಜಯಪುರ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವ ಮಧುಮೇಹ ರೋಗ ದಿನದ ಅಂಗವಾಗಿ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸೆ ವಿಭಾಗ, ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಉಚಿತ ಮಧುಮೇಹ ಪಾದರೋಗದ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.
ನಗರದ ಸರಕಾರಿ ಪಾಲಿಟೆಕ್ನಿಕ್ ಹಿಂಭಾಗದಲ್ಲಿರುವ ಬಿ.ಎಲ್.ಡಿ.ಇ ಸಂಸ್ಥೆಯ ಎ. ವಿ. ಎಸ್. ಆಯುರ್ವೇದ ಕಾಲೇಜಿನ ನಗರ ಆರೋಗ್ಯ ಕೇಂದ್ರದಲ್ಲಿ ನಡೆದ ಈ ಶಿಬಿರವನ್ನು ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮತ್ತು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಶಿಬಿರದ ಸಂಚಾಲಕ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ.ಕೋಟೆಣ್ಣವರ, ಇನ್ಸುಲಿನ್ ಮಧುಮೇಹ ರೋಗಕ್ಕೆ ರಾಮಬಾಣವಾಗಿದ್ದು, ಇದನ್ನು ಸಂಶೋಧಿಸಿದ ಕೆನಡಾದ ವಿಜ್ಞಾನಿ ಡಾ. ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ಅಂಗವಾಗಿ ವಿಶ್ವಾದ್ಯಂತ ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತದೆ. ಪ್ರತಿ ವರ್ಷ ಸುಮಾರು ಶೇ. 15 ರಷ್ಟು ಮಧುಮೇಹಿಗಳು ಪಾದದ ಸಮಸ್ಯೆಯಿಂದ ಬಳಲುತ್ತಾರೆ. ಜಗತ್ತಿನಲ್ಲಿ ಪ್ರತಿ 10 ನಿಮಿಷಕ್ಕೆ ಒಬ್ಬ ಮಧುಮೇಹಿ ತನ್ನ ಪಾದವನ್ನು ಕಳೆದುಕೊಳ್ಳುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷದ ಧ್ಯೇಯವಾಖ್ಯ ಜೀವನದ ವಿವಿಧ ಘಟ್ಟಗಳಲ್ಲಿ ಮಧುಮೇಹ ಎಂಬುದಾಗಿದೆ. ಎಲ್ಲ ಮಧುಮೇಹಿಗಳಿಗೂ ಸುಲಭವಾಗಿ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡುವುದು ಇದರ ಉದ್ದೇಶವಾಗಿದೆ. ರೋಗ ಬಂದ ಮೇಲೆ ಪರದಾಡುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಜಾಣತನ ಎಂಬ ಉಕ್ತಿ ಪಾದರೋಗಕ್ಕೆ ಅನ್ವಯಿಸುತ್ತದೆ ಎಂದು ಹೇಳಿದರು.
ಈ ಶಿಬಿರದಲ್ಲಿ ಸುಮಾರು 60ಕ್ಕೂ ಹೆಚ್ಚು ಹೆಚ್ಚು ಮಧುಮೇಹಿಗಳು ಗ್ಲೂಕೊಮೀಟರ್, ಮೋನೊಫಿಲಾಮೆಂಟ್, ಬಯೋಥಿಸಿಯೋಮೀಟರ್, ಹ್ಯಾರಿಸ್ ಮ್ಯಾಟ್ ಪರೀಕ್ಷೆಗಳಿಗೆ ಒಳಪಟ್ಟು ಸೂಕ್ತ ಚಿಕಿತ್ಸೆಯನ್ನು ಪಡೆದರು.
ಈ ಶಿಬಿರದಲ್ಲಿ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ. ರಮಾಕಾಂತ.ಬಳೂರಕರ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಗಿರೀಶ.ಕುಲ್ಲೊಳ್ಳಿ, ಕಾರ್ಯದರ್ಶಿ ಡಾ. ವಿಜಯ.ಪಾಟೀಲ, ಡಾ. ಸ್ನೇಹಲ ಪಾಟೀಲ, ಡಾ .ರಾಹುಲ ಬಿರಾದಾರ, ಡಾ. ಪ್ರಸಾದಶಕ್ತಿ.ಗಣ್ಣೂರ, ಡಾ.ವಿಜಯಲಕ್ಷ್ಮಿ ಬೆನಕಟ್ಟಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ಸ್ಮಿತ್, ಡಾ. ಗೌರವ, ಡಾ. ಸಚಿನ, ಡಾ. ರುಬಿನಾ ರೋಗಿಗಳ ತಪಾಸಣೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande