
ಗದಗ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಪಟ್ಟಣದ ಶಿಗ್ಲಿ ನಾಕಾ ಬಳಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ಆರಂಭಿಸಿದ್ದು, ಭಜನೆ ಹಾಗೂ ಶಂಖನಾದದ ಮೂಲಕ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಬೆಳೆಗಳನ್ನು ಬೆಳೆಸಿ ಗೋದಾಮಿಗೆ ತಲುಪಿಸುವವರೆಗೂ ಎದುರಿಸುವ ಕಷ್ಟ-ಸಂಕಷ್ಟಗಳ ನಡುವೆಯೂ ಸರಕಾರದಿಂದ ಸರಿಯಾದ ಬೆಂಬಲ ಬೆಲೆ ಲಭಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಇದೇ ವೇಳೆ, ರೈತರ ಅಹವಾಲನ್ನು ಆಲಿಸಲು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ದೀರ್ಘ ಚರ್ಚೆ ನಡೆಸಿದರು. ಸರ್ಕಾರದ ಗಮನಕ್ಕೆ ಬೇಡಿಕೆಗಳನ್ನು ಶೀಘ್ರ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ, “ನಿರ್ಧಾರ ಬಂದು ಕೇಂದ್ರ ತೆರೆದು ಕಾರ್ಯ ಆರಂಭಗೊಳ್ಳುವವರೆಗೂ ಧರಣಿ ಹಿಂತೆಗೆದುಕೊಳ್ಳುವುದಿಲ್ಲ” ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ.
ಹೋರಾಟದ ಸ್ಥಳದಲ್ಲಿ ಲಕ್ಷ್ಮೇಶ್ವರ ಪ್ರದೇಶದ ಹಲವಾರು ಗ್ರಾಮಗಳ ನೂರಾರು ರೈತರು ಜಮಾಯಿಸಿದ್ದು, ಭೂಮಿಯ ಮೇಲೆ ಗುಂಪುಗಳಾಗಿ ಕುಳಿತು ಭಜನೆ ನಡೆಸುತ್ತಾ ಹೋರಾಟವನ್ನು ಮುಂದುವರಿಸುತ್ತಿದ್ದಾರೆ.
ಖರೀದಿ ಕೇಂದ್ರಗಳು ತೆರೆದು ಬೆಂಬಲ ಬೆಲೆ ಜಾರಿ ಮಾಡದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದಿಂದ ಸ್ಪಷ್ಟ ಸೂಚನೆ ಬರುವವರೆಗೂ ಲಕ್ಷ್ಮೇಶ್ವರದ ಧರಣಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP