


ರಾಯಚೂರು, 16 ನವೆಂಬರ್ (ಹಿ.ಸ.) :
ಆ್ಯಂಕರ್ : ನಾಗರಿಕರ ಸಹಭಾಗಿತ್ವ, ಸರ್ಕಾರ ಮತ್ತು ಪೊಲೀಸ್ ಇಲಾಖೆಯ ದಿಟ್ಟ ಕ್ರಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಯೋಜನೆ ಮತ್ತು ಮಾಧ್ಯಮದ ಸಹಕಾರದ ಸಂಘಟಿತ ಪ್ರಯತ್ನದಿಂದ ದೇವದಾಸಿ ಪದ್ಧತಿಯನ್ನು ಬೇರುಸಮೇತ ಕಿತ್ತೊಗೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಅವರು ಹೇಳಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘ, ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮ0ದಿರದಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಕಾಯ್ದೆ-2025ಯು ದೇವದಾಸಿ ಮಕ್ಕಳ ಪಿತೃತ್ವದ ಹಕ್ಕು, ಸಮಗ್ರ ಪುನರ್ವಸತಿ, ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಬಗ್ಗೆ ನಾವು ಗಮನ ಹರಿಸಬೇಕು. ಮಾಜಿ ದೇವದಾಸಿಯರ ಕುಟುಂಬದವರಿಗೆ ವಸತಿ, ಜಮೀನು, ಉದ್ಯೋಗದಂತಹ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಿ ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವತ್ತ ಗಮನ ಹರಿಸಬೇಕಿದೆ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ, ಈಗಾಗಲೇ ಮಾಜಿ ದೇವದಾಸಿಯರ ಸ್ಥಿತಿಗತಿ ಅರಿಯಲು ಸಮೀಕ್ಷೆ ನಡೆದಿದೆ. ಇದು ಉತ್ತಮ ಕಾರ್ಯವಾಗಿದೆ. ಮಾನವಿ, ಸಿಂಧನೂರ, ಮಸ್ಕಿ, ಸಿರವಾರ, ದೇವದುರ್ಗ, ಲಿಂಗಸೂರ ಮತ್ತು ರಾಯಚೂರು ತಾಲೂಕುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಕುಟುಂಬಗಳ ಈಗಿನ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆದು ಅವರ ಮಕ್ಕಳಿಗೆ ಶಿಕ್ಷಣ ಮತ್ತು ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ರಾಯಚೂರು ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಗೌರವಾನ್ವಿತ ಎಂ.ಜಿ. ಶುಕುರೆ ಕಮಲ್ ಅವರು ಮಾತನಾಡಿ, ಪುರಾತನ ಕಾಲದಲ್ಲಿ ದೇವದಾಸಿ ಪದ್ಧತಿಯ ಉದ್ದೇಶ ಬೇರೆಯೇ ಇತ್ತು. ಮಹಿಳೆಯರು ದೇವತೆಗಳಿಗೆ ಅಲಂಕರಿಸಿ ಪೂಜೆ ಸಲ್ಲಿಸುವುದಾಗಿತ್ತು. ಕಾಲಾನಂತರದಲ್ಲಿ ಅದು ಬದಲಾಯಿತು. ಈಗ ಸಮಯ ಬಂದಿದೆ. ಈ ಸಮಾಜಕ್ಕೆ ಕಸದಂತಾಗಿರುವ, ಅಮಾನವೀಯ ದೇವದಾಸಿ ಪದ್ಧತಿಯನ್ನು ಬೇರಿನಿಂದ ಕಿತ್ತೊಗೆಯುವ ಸಂಕಲ್ಪದೊ0ದಿಗೆ ನಾವು ಮುನ್ನುಗ್ಗೋಣ ಎಂದು ತಿಳಿಸಿದರು. ಸರ್ಕಾರ ಮಸೂದೆಯೊಂದನ್ನು ತಂದಿದೆ. ಇದು ಕಾರ್ಯರೂಪಕ್ಕೆ ಬರಬೇಕು. ಜನ ಸಹಕರಿಸಬೇಕು. ದೇವದಾಸಿಯರು ಪ್ರಶ್ನೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ನ್ಯಾಯಮೂರ್ತಿ ಅನು ಸಿವರಾಮನ್ ಅವರು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿನ ದೇವದಾಸಿಯರಿಗೆ ನ್ಯಾಯ ಸಿಗಬೇಕು. ಈ ದಿಶೆಯಲ್ಲಿ ಮಹತ್ವದ ಕಾರ್ಯಯೋಜನೆ ಕಾರ್ಯಗತಗೊಳಿಸುವ ಶಕ್ತಿ ರಾಯಚೂರ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಇದೆ ಎಂದು ಅವರು ತಿಳಿಸಿದರು.
ಮಾಜಿ ದೇವದಾಸಿಯ ಸ್ಥಿತಿಗತಿ ಅರಿಯುವ ದಿಶೆಯಲ್ಲಿ ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಉತ್ತಮ ಕಾರ್ಯಕ್ರಮ ಸಂಘಟಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕು ಮೊದಲು ಹೋರಾಗಾರ್ತಿ ಮೋಕ್ಷಮ್ಮ ಅವರು ಮಾತನಾಡಿ, ದೇವಾಲಯಗಳಲ್ಲಿ ದೇವರ ಸೇವೆ ಮಾಡುವ ಕಾರ್ಯಕ್ಕೆ ದೇವದಾಸಿ ಪದ್ಧತಿ ಎಂದು ಕರೆದರು. ಆ ದೇವದಾಸಿಯರನ್ನು ಲೈಂಗಿಕತೆಗೆ ಬಳಸಿಕೊಳ್ಳುವ ಪರಂಪರೆ ಮುಂದುವರೆಯಿತು. ಇದು ಹಳ್ಳಿಹಳ್ಳಿಗೂ ವ್ಯಾಪಿಸಿತು. ಈ ಪದ್ಧತಿ ತೊಲಗಿಸಲು ನಾವು ಅವರನ್ನು ಸಂಘಟಿತರನ್ನಾಗಿ ಮಾಡಿದೆವು. ಅವರಿಗೆ ಮನೆ, ಜಮೀನು, ಮಾಶಾಸನದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ ಎಂದರು.
ಯಾರು ಸಹ ದೇವದಾಸಿಯರು ಆಗದಂತೆ ನಾವು ನೀವೆಲ್ಲರೂ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಆದೇಶ ಪತ್ರ ವಿತರಣೆ: ಜಿಲ್ಲಾ ಪಂಚಾಯತನಿAದ ಮನೆ ಮಂಜೂರಾತಿ ಆದೇಶ ಪತ್ರವನ್ನು ಹುಲಿಗೆಮ್ಮ ಮತ್ತು ಯಲ್ಲಮ್ಮ ಅವರಿಗೆ ನ್ಯಾಯಮೂರ್ತಿಗಳು ವಿತರಿಸಿದರು. ಮಾಜಿ ದೇವದಾಸಿ ಎಂದು ಸರೋಜಮ್ಮ, ನರಸಮ್ಮ ರಾಮವ್ವ ಅವರಿಗೆ ದೃಢೀಕರಣ ಪತ್ರ ನೀಡಲಾಯಿತು. ರಾಮಮ್ಮ ಮತ್ತು ಬಸಮ್ಮ ಅವರಿಗೆ ಆದಾಯೋತ್ಪನ್ನ ಚಟುವಟಿಕೆಯ ಮತ್ತು ಲಕ್ಷ್ಮಿ ಮತ್ತು ಕೃಷ್ಣದೇವಿ ಅವರಿಗೆ ಕಾರ್ಮಿಕ ಇಲಾಖೆಯ ಆದೇಶದ ಪ್ರತಿ ವಿತರಿಸಲಾಯಿತು.
ಪುಸ್ತಕ ಬಿಡುಗಡೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಿಸಿದ 18 ಮಕ್ಕಳ ಹಕ್ಕುಗಳು ಕಿರು ಹೊತ್ತಿಗೆ ಮತ್ತು ಪೊಲೀಸ್ ಇಲಾಖೆ ಪ್ರಕಟಿಸಿದ ಜಾಗೃತಿ ಕೈಪಿಡಿಯನ್ನು ಸಹ ಬಿಡುಗಡೆಗೊಳಿಸಲಾಯಿತು. ಗೌರವಾನ್ವಿತ ರಾಯಚೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾರುತಿ ಬಾಗಡೆ ಸ್ವಾಗತಿಸಿದರು.
ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾಧಿಕಾರಿ ನಿತೀಶ್ ಕೆ., ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹೆಚ್.ಶಶಿಧರ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್, ಅಪರ ಜಿಲ್ಲಾಧಿಕಾರಿ ಶಿವಾನಂದ, ಕೆಎಸ್‌ಎಲ್‌ಎಸ್‌ಎದ ಉಪ ಕಾರ್ಯದರ್ಶಿ ಶ್ರೀಧರ ಎಂ ಅವರು ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶರಾದ ಹೆಚ್.ಎ.ಸಾತ್ವಿಕ್ ವಂದಿಸಿದರು. ಕಾರ್ಯಕ್ರಮವನ್ನು ವಸುಂಧರಾ ಮತ್ತು ಯಶೋಧಾ ಅವರು ನಿರೂಪಿಸಿದರು. ಗಾಯಕಿ ಮಹಾಲಕ್ಷ್ಮಿ ಅವರು ಪ್ರಾರ್ಥಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್