
ಕಲಬುರಗಿ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಕೊನೆಗೂ ಇಂದು ಯಶಸ್ವಿಯಾಗಿ ನಡೆಯಿತು. ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಭಗವಾ ಧ್ವಜ ಹಾರಿಸಿ ಆರ್‌ಎಸ್‌ಎಸ್ ಕಾರ್ಯಕರ್ತರು ಪಥ ಸಂಚಲನ ನಡೆಸಿದರು.
ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿ ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ,ಎಚ್‌ಡಿಎಫ್‌ಸಿ ಬ್ಯಾಂಕ್ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ನ್ಯಾಯಾಲಯದ ಆದೇಶದಂತೆ 300 ಜನ ಗಣವೇಶಧಾರಿಗಳು ಹಾಗೂ 50 ಜನ ಬ್ಯಾಂಡ್ ವಾದಕರಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗಿತ್ತು.
ಆರ್‌ಎಸ್‌ಎಸ್ 100 ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಡೆದ ಪಥಸಂಚಲನದಲ್ಲಿ ಭಾಗಿಯಾದ ಗಣವೇಷಧಾರಿಗಳಿಗೆ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ನೀಡಿದರು.ರಸ್ತೆಯ ಎರಡೂ ಬದಿಯಲ್ಲಿ ನಿಂತು ಗಣವೇಷಧಾರಿಗಳ ಮೇಲೆ ಹೂವಿನ ಮಳೆ ಸುರಿಸಿದರು.ಮಧ್ಯಾಹ್ನ 3:45ಕ್ಕೆ ಆರಂಭವಾದ ಪಥ ಸಂಚಲನ 4:22ಕ್ಕೆ ಮುಕ್ತಾಯವಾಯಿತು. ಸರಿಸುಮಾರು 47 ನಿಮಿಷಗಳ ಕಾಲ ಒಟ್ಟು 1.25 ಕಿ.ಮೀ ಪಥಸಂಚಲನ ನಡೆಯಿತು.
ಪಥ ಸಂಚಲನ ಸಾಗಿದ ದಾರಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಕಲಬುರಗಿ ಪೋಲಿಸ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್, ಕೆಎಸ್‌ಆರ್‌ಪಿ ಡಿಎಆರ್ ತುಕಡಿ ಸೇರಿದಂತೆ 650ಜನ ಪೋಲಿಸರು 250ಜನ ಹೋಮ್ ಗಾರ್ಡ್ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ಪಥಸಂಚಲನ ನಡೆಯುವ ಮಾರ್ಗದಲ್ಲಿ ಪುರಸಭೆಯಿಂದ 12 ಹಾಗೂ ಪೋಲಿಸ್ ಇಲಾಖೆಯಿಂದ 44 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. 5 ಡ್ರೋಣ್ ಕ್ಯಾಮೆರಾ ಮೂಲಕ ಜನರ ಚಲನವಲನದ ಮೇಲು ಖಾಕಿ ಪಡೆ ಹದ್ದಿನ ಕಣ್ಣಿಟ್ಟಿತ್ತು. ಪಥ ಸಂಚಲನ ನಡೆಯುವ ಮಾರ್ಗದಲ್ಲಿ ಒಟ್ಟು 200 ಧ್ವಜ ಹಾಗೂ ಬಂಟಿಂಗ್, ಪ್ಲೆಕ್ಸ್, ಕಟ್ಟಲು ಪುರಸಭೆ ಅನುಮತಿ ನೀಡಿತ್ತು.
ಪಥಸಂಚಲನದಲ್ಲಿ ಭಾಗಿಯಾಗಲು ಬೇರೆ ಕಡೆಯಿಂದಲೂ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಆರ್‌ಎಸ್‌ಎಸ್ ಮೊದಲೇ ಪಟ್ಟಿಯಲ್ಲಿ ನೀಡಿದ್ದ ವ್ಯಕ್ತಿಗಳಿಗೆ ಮಾತ್ರ ಪೊಲೀಸರು ಅನುಮತಿ ನೀಡಿದ್ದರು. ಚಿತ್ತಾಪುರ ಹೊರತು ಪಡಿಸಿ ಬೇರೆ ಕಡೆಯಿಂದ ಆಗಮಿಸಿದ ಕಾರ್ಯಕರ್ತರಿಗೆ ಪಥಸಂಚಲನದಲ್ಲಿ ಭಾಗಿಯಾಗಲು ಅವಕಾಶ ನೀಡಿರಲಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa