


ಬಳ್ಳಾರಿ, 14 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಕೊಪ್ಪಳ ನಗರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು.
ನಗರದ ಎನ್.ಜಿ.ಓ ಕಾಲೋನಿಯಲ್ಲಿನ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಆಚರಿಸಲಾಯಿತು. ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ವಟಪರವಿ ಅವರು ಉದ್ಘಾಟಿಸಿ 14ನೇ ನವಂಬರ್ 1919 ಭಾರತೀಯ ಗ್ರಂಥಾಲಯ ಚಳುವಳಿಯಲ್ಲಿಯೇ ಮಹತ್ವದ ದಿನ. ಅಖಿಲ ಭಾರತ ಸಾರ್ವಜನಿಕ ಗ್ರಂಥಾಲಯ ಸಮ್ಮೇಳನವನ್ನು ಅಂದಿನ ಮದ್ರಾಸ್ ಇಂದಿನ ಚೆನೈ ಗೋಖಲೆ ಭವನದಲ್ಲಿ ಬರೋಡದ ಗ್ರಂಥಾಲಯದ ನಿರ್ದೇಶಕರಾದ ದಿವಂಗತ ಜೆ.ಎಸ್.ಕುಟಾಲ್ಕರ್ ಅವರು ನೇರವೇರಿಸಿದರು.
ಇದರಷ್ಟೇ ಮುಖ್ಯ ವೆನಿಸುವ ಪುಸ್ತಕ ಪ್ರಿಯರು ಹಾಗೂ ಮಕ್ಕಳ ನೆಚ್ಚಿನ ಚಾಚಾ ಆಗಿದ್ದ ಜವಾಹರಲಾಲ್ ನೆಹರೂ ಅವರು ಜನ್ಮದಿನವೂ ಆಗಿದ್ದೂ ಆ ದಿನದಿಂದಲೇ ಒಂದು ವಾರಗಳ ಕಾಲ ಸಪ್ತಾಹವನ್ನು ಆಚರಿಸಲು ನಿರ್ಧರಿಸಿ 1968 ರಿಂದ ನವಂಬರ್ 14 ರಿಂದ 20 ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡೊಳ್ಳಿನ ಸಾರ್ವಜನಿಕ ಗ್ರಂಥಾಲಯಗಳನ್ನು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೊಪ್ಪಳದ ಗಣೇಶ ನಗರ ಗ್ರಂಥಾಲಯ, ಅಶೋಕ ಸರ್ಕಲ್ ಹತ್ತಿರದ ಸಾಹಿತ್ಯ ಭವನದ ಹಿಂಭಾಗದ ಗ್ರಂಥಾಲಯ, ಕುಷ್ಟಗಿ ಶಾಖಾ ಗ್ರಂಥಾಲಯ, ಮುನಿರಾಬಾದ ಶಾಖಾ ಗ್ರಂಥಾಲಯ, ಗಂಗಾವತಿ ಶಾಖಾ ಗ್ರಂಥಾಲಯ, ಕುಕನೂರು ಶಾಖಾ ಗ್ರಂಥಾಲಯ, ಯಲಬುರ್ಗಾ ಶಾಖಾ ಗ್ರಂಥಾಲಯ, ಇಟಗಿ ಶಾಖಾ ಗ್ರಂಥಾಲಯ ಸೇರಿದಂತೆ ಜಿಲ್ಲೆಯ ಗ್ರಂಥಾಲಯಗಳಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಓದುಗರೊಂದಿಗೆ ಜರುಗಿತು.
ಸಪ್ತಾಹ ನಿಮಿತ್ಯ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪುಸ್ತಕ ಪ್ರದರ್ಶನದಲ್ಲಿ ಕಿಟ್ಟಲ್ ರ ನಿಘಂಟು, ಕನ್ನಡದ ಶ್ರೇಷ್ಠ ಕೃತಿಗಳಾದ ಮಲೆಗಳಲ್ಲಿ ಮದುಮಗಳು, ಮೂಕಜ್ಜಿಯ ಕನಸುಗಳು, ಭಾರತ ಸಿಂಧು ರಶ್ಮಿ, ಕಾನೂರು ಹೆಗ್ಗಡಿತಿ, ಮನೋರಮಾ ಇಯರ್ ಬುಕ್, ಶಿವರಾಮ ಕಾರಂತ ಅವರ ಬಾಲ ಪ್ರಪಂಚ ಸಂಪುಟ, ಮಾಸ್ತಿ ಸಂಪುಟ, ಎದೆಯ ಹಣತೆ, ಎದೆಗೆ ಬಿದ್ದ ಅಕ್ಷರ, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಧಿಸಿದ ಪುಸ್ತಕಗಳನ್ನು ಇರಿಸಲಾಗಿತ್ತು.
ಗಣೇಶ ನಗರ ಶಾಖೆಯ ಗ್ರಂಥಾಲಯ ಸಹಾಯಕಿ ವಿಜಯಲಕ್ಷ್ಮೀ ವಡ್ಡಟ್ಟಿ, ಗಂಗಾವತಿ ಶಾಖೆಯ ಸಹಾಯಕ ಗ್ರಂಥಪಾಲಕ ಕೊಟ್ರಪ್ಪ.ಬಿ, ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿಯಲ್ಲಿನ ಪ್ರಥಮ ದರ್ಜೆ ಸಹಾಯಕಿ ಉಮಾ ಹಳ್ಯಾಳ, ದ್ವಿತೀಯ ದರ್ಜೆ ಸಹಾಯಕಿ ರಾಜೇಶ್ವರಿ ಸೇರಿದಂತೆ ಓದುಗರು ಮತ್ತಿತರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್