ದೆಹಲಿ : ಕೆಂಪುಕೋಟೆ ಸಮೀಪ ಭೀಕರ ಸ್ಫೋಟ ; 8ಕ್ಕೂ ಹೆಚ್ಚು ಮಂದಿ ಸಾವು
ನವದೆಹಲಿ, 10 ನವೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ಕೆಂಪುಕೋಟೆ ಸಮೀಪದ ಲಾಲ್‌ಕಿಲಾ ಮೆಟ್ರೋ ನಿಲ್ದಾಣದ ಗೇಟ್‌ ಸಂಖ್ಯೆ-1ರ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ 8 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ
Blast


ನವದೆಹಲಿ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ಕೆಂಪುಕೋಟೆ ಸಮೀಪದ ಲಾಲ್‌ಕಿಲಾ ಮೆಟ್ರೋ ನಿಲ್ದಾಣದ ಗೇಟ್‌ ಸಂಖ್ಯೆ-1ರ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ 8 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.

ಸ್ಫೋಟವು ಸಂಜೆ 6.45ರಿಂದ 7 ಗಂಟೆ ನಡುವಿನ ಅವಧಿಯಲ್ಲಿ ಸಂಭವಿಸಿದ್ದು, ತೀವ್ರ ಸ್ಪೋಟ ಶಬ್ದದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇದು ಉಗ್ರ ಕೃತ್ಯವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಸಿಎನ್‌ಜಿ ಸಿಲಿಂಡರ್ ಸ್ಫೋಟದ ಸಾಧ್ಯತೆಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ತಕ್ಷಣವೇ 7ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು, ದೆಹಲಿ ಪೊಲೀಸ್ ವಿಶೇಷ ಘಟಕ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಧಾವಿಸಿ, ಸ್ಫೋಟದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿವೆ. ಸುರಕ್ಷತಾ ಕಾರಣಕ್ಕಾಗಿ ದೆಹಲಿಯಾದ್ಯಂತ ಹೈಅಲರ್ಟ್‌ ಘೋಷಿಸಲಾಗಿದೆ.

ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರ ಛಿದ್ರಗೊಂಡಿದ್ದು, ಭದ್ರತಾ ಪಡೆಗಳು ಮೃತದೇಹಗಳನ್ನು ಸ್ಥಳದಿಂದ ಹೊರತೆಗೆದು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರೆಸಿವೆ. ಸ್ಥಳದಲ್ಲಿನ ರಸ್ತೆಗಳನ್ನು ಮುಚ್ಚಲಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಬೆಳಗ್ಗೆ ದೆಹಲಿಗೆ ಸಮೀಪವಿರುವ ಹಲವು ಪ್ರದೇಶಗಳಲ್ಲಿ 2,900 ಕೆಜಿ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದರು. ಆ ಬೆಳವಣಿಗೆ ನಡೆದ ಕೆಲವೇ ಗಂಟೆಗಳಲ್ಲಿ ಈ ಸ್ಫೋಟ ಸಂಭವಿಸಿರುವುದು ತನಿಖೆಗೆ ಹೊಸ ತಿರುವು ನೀಡಿದೆ.

ಪ್ರಧಾನಮಂತ್ರಿ ಕಚೇರಿ, ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಚೇರಿಗಳು ಘಟನೆಯ ಮೇಲ್ವಿಚಾರಣೆ ಮಾಡುತ್ತಿದ್ದು, ತನಿಖೆಗೆ ಎನ್‌ಐಎ ಸಹ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande