ವಾಷಿಂಗ್ಟನ್, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಇಸ್ರೇಲ್ ಮತ್ತು ಹಮಾಸ್ ಸಂಘಟನೆಗಳು ಗಾಜಾದಲ್ಲಿ ಶಾಂತಿ ಸ್ಥಾಪನೆಗಾಗಿ 20 ಅಂಶಗಳ ಯೋಜನೆಗೆ ಒಪ್ಪಿಕೊಂಡು ಮೊದಲ ಹಂತದ ಕದನ ವಿರಾಮದ ಪ್ರಸ್ತಾವನೆಗೆ ಸಹಿ ಹಾಕಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾತ್ರಿ ಘೋಷಿಸಿದ್ದಾರೆ.
ಟ್ರಂಪ್ ಅವರ ಪ್ರಕಾರ, ಈ ಒಪ್ಪಂದದ ಪ್ರಾರಂಭಿಕ ಹಂತದಡಿ ಸೋಮವಾರದಿಂದ ಒತ್ತೆಯಾಳುಗಳ ಬಿಡುಗಡೆ ಆರಂಭವಾಗುವ ನಿರೀಕ್ಷೆಯಿದೆ. ಗಾಜಾ ಯುದ್ಧ ಅಂತ್ಯಗೊಳಿಸಲು ಈಜಿಪ್ಟ್‌ನ ಶರ್ಮ್ ಎಲ್-ಶೇಖ್ ನಗರದಲ್ಲಿ ನಡೆದ ಪರೋಕ್ಷ ಮಾತುಕತೆಗಳಲ್ಲಿ ಒಪ್ಪಂದ ತೀರ್ಮಾನವಾಗಿದೆ. ಹಮಾಸ್ ತನ್ನ ಒತ್ತೆಯಾಳುಗಳು ಮತ್ತು ಪ್ಯಾಲೆಸ್ಟಿನಿಯನ್ ಕೈದಿಗಳ ವಿನಿಮಯ ಪಟ್ಟಿಯನ್ನು ಈಗಾಗಲೇ ಹಸ್ತಾಂತರಿಸಿದೆ.
ಸಿಎನ್ಎನ್ ವರದಿ ಪ್ರಕಾರ, ಟ್ರಂಪ್ ಅವರು ಘೋಷಣೆ ಮಾಡುವ ಮೊದಲು ಓವಲ್ ಕಚೇರಿಯಲ್ಲಿ ಫೋನ್ ಮೂಲಕ ಉನ್ನತ ಮಟ್ಟದ ಮಾತುಕತೆ ನಡೆಸಿ, ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ಹಂಚಿಕೊಂಡರು. ಶ್ವೇತಭವನದ ಹಿರಿಯ ಅಧಿಕಾರಿ ಒಬ್ಬರ ಪ್ರಕಾರ, ಒಪ್ಪಂದವನ್ನು ಗುರುವಾರ ಇಸ್ರೇಲ್ ಸಚಿವ ಸಂಪುಟಕ್ಕೆ ಮಂಡಿಸಲಾಗುವುದು ಮತ್ತು ಅನುಮೋದನೆಯ ನಂತರ ಕದನ ವಿರಾಮ ಜಾರಿಗೆ ಬರಲಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಟ್ರಂಪ್ ಅವರ ಪ್ರಯತ್ನಗಳಿಗೆ ಧನ್ಯವಾದ ಅರ್ಪಿಸಿ, ಅವರನ್ನು ಇಸ್ರೇಲ್ ಸಂಸತ್ ನೆಸ್ಸೆಟ್‌ನಲ್ಲಿ ಉದ್ದೇಶಿಸಿ ಮಾತನಾಡಲು ಆಹ್ವಾನಿಸಿದ್ದಾರೆ. ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯ ಪ್ರಕಾರ, ಟ್ರಂಪ್ ಅವರು ನೆತನ್ಯಾಹು ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
ಕದನ ವಿರಾಮದ ಸುದ್ದಿಯ ನಂತರ ಒತ್ತೆಯಾಳುಗಳ ಕುಟುಂಬಗಳಲ್ಲಿ ಸಂಭ್ರಮ ವ್ಯಕ್ತವಾಗಿದೆ. ಗಾಲಿ ಮತ್ತು ಝಿವ್ ಬೆರ್ಮನ್ ಅವರ ಸಹೋದರ ಲಿರಾನ್ ಬೆರ್ಮನ್ ಇನ್ಸ್ಟಾಗ್ರಾಂನಲ್ಲಿ ನಿಜವಾಗಿಯೂ ಸಂತೋಷವಾಗಿದೆ, ನನ್ನ ಪ್ರಿಯವರನ್ನು ಶೀಘ್ರದಲ್ಲೇ ನೋಡಲು ಬಯಸುತ್ತೇನೆ ಎಂದು ಬರೆದಿದ್ದಾರೆ. ಹಮಾಸ್ ಹಿಡಿದಿಟ್ಟುಕೊಂಡಿರುವ ಇಸ್ರೇಲಿ ಸೈನಿಕ ಇಟೇ ಚೆನ್ ಅವರ ತಂದೆ ರೂಬಿ ಚೆನ್ ಟ್ರಂಪ್ ಮತ್ತು ಅಮೆರಿಕ ಮಾತುಕತೆ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇಸ್ರೇಲ್ ಕಾನೂನಿನ ಪ್ರಕಾರ, ಒತ್ತೆಯಾಳು ವಿನಿಮಯದಡಿ ಕೈದಿಗಳನ್ನು ಬಿಡುಗಡೆ ಮಾಡಲು ಕ್ಯಾಬಿನೆಟ್ ಅನುಮೋದನೆ ಅಗತ್ಯ. ಸಂಪುಟವು ಒಪ್ಪಂದಕ್ಕೆ ಮತ ಚಲಾಯಿಸಿದ ನಂತರ, ಅದರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕಡಿಮೆ ಅವಧಿಯ ಸಮಯ ದೊರೆಯುತ್ತದೆ. ಈ ಹಂತ ಪೂರ್ತಿಯಾದ ಬಳಿಕ ಬಿಡುಗಡೆ ಪ್ರಕ್ರಿಯೆ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನೆತನ್ಯಾಹು ಗುರುವಾರದ ಸಂಪುಟ ಸಭೆಯಲ್ಲಿ ಒಪ್ಪಂದದ ಸಂಪೂರ್ಣ ವಿವರಗಳನ್ನು ಮಂಡಿಸಲಿದ್ದಾರೆ. ಇದು ಇಸ್ರೇಲ್‌ಗೆ ಒಳ್ಳೆಯ ದಿನ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa