ಭೋಪಾಲ್, 07 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ತಮಿಳುನಾಡಿನಲ್ಲಿ ತಯಾರಾದ “ಕೋಲ್ಡ್ರಿಫ್” ಕೆಮ್ಮಿನ ಸಿರಪ್ ಸೇವನೆಯಿಂದ ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಛಿಂದ್ವಾರಾದ ಮತ್ತೊಬ್ಬ ಒಂದೂವರೆ ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಪರೀಕ್ಷೆಯಲ್ಲಿ ಸಿರಪ್ ಮಾದರಿಯಲ್ಲಿ 48.6% ಡೈಥಿಲೀನ್ ಗ್ಲೈಕೋಲ್ ಪತ್ತೆಯಾಗಿದ್ದು, ಇದು ಮಾನವ ದೇಹಕ್ಕೆ ಅತ್ಯಂತ ವಿಷಕಾರಿ. ಘಟನೆಯ ತನಿಖೆಗೆ ಮಧ್ಯಪ್ರದೇಶ ಪೊಲೀಸರು ಎಸ್‌ಐಟಿ ರಚಿಸಿ ತಮಿಳುನಾಡಿನ ಶ್ರೀಸನ್ ಫಾರ್ಮಾ ಕಂಪನಿಗೆ ಭೇಟಿ ನೀಡುತ್ತಿದ್ದಾರೆ. ತಮಿಳುನಾಡು ಸರ್ಕಾರ ಕಂಪನಿಯ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ.
ಮಧ್ಯಪ್ರದೇಶ ಸರ್ಕಾರ ಕ್ರಮವಾಗಿ ಔಷಧ ನಿಯಂತ್ರಕ ದಿನೇಶ್ ಕುಮಾರ್ ಮೌರ್ಯ ಅವರನ್ನು ತೆಗೆದುಹಾಕಿ, ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಘಟನೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಷ್ಟ್ರೀಯ ಬಾಲ ಹಕ್ಕು ರಕ್ಷಣಾ ಆಯೋಗ ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ನೋಟಿಸ್ ನೀಡಿ ಶಂಕಿತ ಸಿರಪ್ ಮಾರಾಟವನ್ನು ತಕ್ಷಣ ನಿಲ್ಲಿಸಲು ಆದೇಶಿಸಿವೆ.
ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಕೋಲ್ಡ್ರಿಫ್ ಸಿರಪ್ ಮಾರಾಟವನ್ನು ನಿಷೇಧಿಸಿವೆ. ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ತಪ್ಪಿತಸ್ಥರನ್ನು ಯಾವುದೇ ಸಂದರ್ಭದಲ್ಲೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa