ಕೋಲಾರ, 0೭.ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಕರ್ನಾಟಕದ ಅವಿಭಜಿತ ಕೋಲಾರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಪಾಲಾರ್ ನದಿ ಮುಂದೆ ಹರಿಯುತ್ತಾ ಸಾಗಿ ಬಂಗಾಳ ಕೊಲ್ಲಿ ಸಮುದ್ರ ಸೇರುತ್ತೆ. ಇದೇ ಪಾಲಾರ್ ನದಿದೇವಿಯ ತಟದಲ್ಲಿರುವ ಹಲವಾರು ಹಳ್ಳಿಗಳಲ್ಲಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಈ ಪಾಲಾರ್ ನದಿ ಮಳೆಗಾಲದಲ್ಲಿ ಮಾತ್ರ ಇಲ್ಲಿಯ ಜನರ ಪಾಲಿಗೆ ಜೀವನದಿಯಾಗಿ ಹರಿಯುತ್ತದೆ. ಕೆಜಿಫ್ ತಾಲೂಕಿನ ಬೇತಮಂಗಲದ ಸಮೀಪ, ಸ್ವಾತಂತ್ರ್ಯ ಪೂರ್ವದಲ್ಲಿ ಕೋಲಾರದ ಚಿನ್ನದ ಗಣಿಗಳಿಗೆ ಇಲ್ಲಿಂದ ನೀರು ಪೂರೈಕೆ ಮಾಡಲು ಇಲ್ಲಿ ಜಲಾಶಯ ಕೂಡಾ ನಿರ್ಮಾಣ ಮಾಡಲಾಗಿದೆ.
ಈ ಜಲಾಶಯದ ಹಿನ್ನೀರಿನ ಸುತ್ತ ಬರುವ ಹಲವಾರು ಗ್ರಾಮಗಳ ರೈತರು ಏತ ನೀರಾವರಿಯ ಮೂಲಕ ಕೃಷಿ ಮಾಡುತ್ತಿದ್ದಾರೆ.
ಜಲಾಶಯದ ಹಿನ್ನಿರಿಗೆ ಹೊಂದಿಕೊಂಡಿರುವ ಗ್ರಾಮಗಳ ರೈತರು , ಪಾಲಾರ್ ನದಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ, ಹಲವಾರು ಮೀನುಗಾರರು ಕೂಡ ಈ ಜಲಾಶಯವನ್ನೇ ತಮ್ಮ ಮೀನುಗಾರಿಕೆಗೆ ಅವಲಂಬಿತರಾಗಿದ್ದಾರೆ. ಆದರೆ, ಈ ಜಲಾಶಯ ಬತ್ತಿ ಹೋದಾಗ ಈ ಜಲಾಶಯದ ನೆಲದಲ್ಲಿಯೇ ಇಲ್ಲಿಯ ರೈತರು ತಮ್ಮ ದನ ಕರುಗಳನ್ನು ಇಲ್ಲಿಗೆ ಮೇಯಿಸಲು ಕರೆ ತರುತ್ತಾರೆ. ಇನ್ನು ಈ ಜಲಾಶಯ ತುಂಬಿ ಹರಿದಾಗ ಮಾತ್ರ ಇಲ್ಲಿ ದುಸ್ತರವೇ ಎದುರಾಗಿ ಆಸುಪಾಸಿನ ಗ್ರಾಮಗಳ ಸಂಪರ್ಕವೇ ಕಡಿದು ಹೋಗುತ್ತಿತ್ತು.
ಇದರಲ್ಲಿ ಪ್ರಮುಖವಾಗಿ ನತ್ತ ಗ್ರಾಮ, ಕಳ್ಳಿಕುಪ್ಪ ಸೇರಿದಂತೆ ಇನ್ನಿತರ ಹಳ್ಳಿಗರು ಈ ಪಾಲಾರ್ ನದಿ ದಾಟಲು ಹರಸಾಹಸ ಪಡಬೇಕಾಗಿತ್ತು. ಪ್ರತಿ ಬಾರಿಯ ಮಳೆಗಾಲದಲ್ಲಿ ನದಿಯ ಪ್ರವಾಹದ ಎದುರು ಬದುಕಿಗಾಗಿ ಈ ಗ್ರಾಮಸ್ಥರು ಈಜಬೇಕಾಗಿತ್ತು.
ಅದರಲ್ಲೂ ಇಲ್ಲಿಯ ಗ್ರಾಮಗಳಾದ ಹಂಗಳ, ಗುಟ್ಟಳ್ಳಿ, ಕವರಗಾನಹಳ್ಳಿಗಳ ಮೂಲಕ ಸುಮಾರು ೨೦ ಕಿಲೋ ಮೀಟರ್ ದೂರ ಸುತ್ತುಹಾಕಿ ಕೊಂಡೇ ಬೇತಮಂಗಲಕ್ಕೆ ತಲುಪಬೇಕಾಗಿತ್ತು.
ಮತ್ತೊಂದು ಮಹತ್ವದ ವಿಚಾರ ಅಂದ್ರೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಲ್ಲಿ ದೊಡ್ಡ ದೊಡ್ಡ ಚಪ್ಪಡಿ ಕಲ್ಲು ಬಳಸಿ, ಪರಸುಬಂಧಿಯನ್ನು ನಿರ್ಮಿಸಲಾಗಿತ್ತು.
ಪಾಲಾರ್ ನದಿಯ ನಡುವೆ ಕಲ್ಲುಕೂಚಗಳನ್ನು ನೆಟ್ಟು, ಈ ಕಲ್ಲು ಕುಚದ ಮೇಲೆ ಚಪ್ಪಡಿ ಕಲ್ಲುಗಳನ್ನು ಹಾಸಿ, ಆ ಕಲ್ಲುಗಳು ಒಂದಕ್ಕೊಂದು ಜಾರದಂತೆ ಕಬ್ಬಿಣದ ಸರಳು ಮತ್ತು ಬೋಲ್ಟುಗಳಿಂದ ಜೋಡಿಸಲಾಗಿದೆ. ಇಂತಹ ಎರಡು ಪರಸುಬಂಧಿಗಳನ್ನು ಗ್ರಾಮ ನಲ್ಲೂರು ಮತ್ತು ನತ್ತ ಗ್ರಾಮಗಳ ಸಮೀಪ ಇಲ್ಲಿಯ ಪೂರ್ವಿಕರು ನದಿ ದಾಟಲು ನಿರ್ಮಿಸಿಕೊಂಡಿದ್ದರು.
ನಲ್ಲೂರು ಗ್ರಾಮದ ಸಮೀಪ ಇದ್ದ ಈ ಹಳೆಯ ಪರಸುಬಂಧಿ ಈಗ ತನ್ನ ಕುರುಹುಗಳನ್ನು ಕಳೆದುಕೊಂಡಿದೆ ಬಿಡಿ. ಆದರೆ , ನತ್ತ ಗ್ರಾಮದ ಸಮೀಪ ಈಗಲೂ ಆ ಪೂರ್ವಿಕರ ಮುಂದಾಲೋಚನೆಗೆ ನಿದರ್ಶನವಾಗಿರುವ ಈ ಪರಸುಬಂಧಿ ಉಳಿದುಕೊಂಡಿದೆ.
ಈ ನತ್ತ ಗ್ರಾಮದ ಗ್ರಾಮಸ್ಥರು ಇವತ್ತಿಗೂ ಸಹಿತ ಪರಸುಬಂಧಿಯ ಅಗತ್ಯ ಎದುರಾದಾಗ ಈ ಇದೇ ಪರಸುಬಂಧಿ ಬಳಸಿಕೊಂಡು ನದಿ ದಾಟುತ್ತಾರೆ. ಈ ಹಿಂದೆಲ್ಲಾ ಪ್ರವಾಹ ಬಂದಾಗ ಪರಸುಬಂಧಿಯ ಮೇಲೆ ನಡೆದುಕೊಂಡು ಹೋಗಿ , ಜನ ತಮ್ಮ ಜಾನುವಾರುಗಳ ಜೊತೆ ನದಿ ದಾಟುತ್ತಿದ್ದರು. ಈ ನದಿ ದಾಟುವಾಗ ಸ್ವಲ್ಪ ಎಚ್ಚರ ತಪ್ಪಿದರೂ ನದಿಗೆ ಜನರು ಮತ್ತವರ ಜಾನುವಾರುಗಳು ಉರುಳಿ ಬೀಳುತ್ತಿದ್ದರು ಎಂಬುದುಮಾತ್ರ ಬೇಸರದ ಸಂಗತಿ.
ನತ್ತ ಗ್ರಾಮದ ನಿವಾಸಿ ಸಾವಿತ್ರಮ್ಮ ಒಂದು ಕಾಲದಲ್ಲಿ ಈ ಪರಸುಬಂಧಿಯ ಮೂಲಕ ಪಾಲಾರ್ ನದಿ ದಾಟುತ್ತಿದ್ದರು. ಈ ಪರಸುಬಂಧಿಯ ಮೂಲಕ ತಾನು ಹಾದು ಹೋಗುತ್ತಿದ್ದಾಗ ಎದುರಿಸುತ್ತಿದ್ದ ಕಷ್ಟಗಳನ್ನು ಎಂದು ಸಾವಿತ್ರಮ್ಮ ತಿಳಿಸಿದ್ದಾರೆ.
ಕೋಗಿಲಹಳ್ಳಿ ಗ್ರಾಮದ ನಿವಾಸಿ, ವೆಂಕಟರಮಣ ರಾವ್ ತಮ್ಮ ಶಾಲಾ ದಿನಗಳಲ್ಲಿ ಪರಸುಬಂಧಿ ದಾಟುತ್ತಿದ್ದಾಗ ತಾವು ಎದುರಿಸುತ್ತಿದ್ದ ಕಷ್ಟಗಳನ್ನು ಕಣ್ಣಿಗೆ ಕಟ್ಟುವಂತೆ ತಿಳಿಸಿದ್ದಾರೆ.
ಆ ದಿನಗಳಲ್ಲಿ ಮೊಣಕಾಲುದ್ದಕ್ಕೂ ನದಿ ನೀರು ಬರುತ್ತಿತ್ತಂತೆ. ಕಲಿಯಲು ಶಾಲೆಗೆ ಹೋಗುತ್ತಿದ್ದ ತಮ್ಮ ಕೈಯಲ್ಲಿದ್ದ ಪುಸ್ತಕಗಳನ್ನು ಆಗ ತಲೆ ಮೇಲಿಟ್ಟುಕೊಂಡು ನದಿ ದಾಟಬೇಕಾಗಿತ್ತಂತೆ. ಮುಂದಿನ ಕೆಲವು ವರ್ಷಗಳ ನಂತರ ಚಿಕ್ಕ ಸೇತುವೆಯೊಂದು ಅಲ್ಲಿ ನಿರ್ಮಾಣ ಗೊಂಡಿತ್ತಂತೆ. ಆದರೂ ,ಮಳೆ ಬಂದಾಗ ಇಲ್ಲಿ ಪ್ರವಾಹದ ಎದುರು ಸಂಪರ್ಕವೇ ಕಡಿದು ಹೋಗುತ್ತಿತ್ತಂತೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಜನರ ಕಷ್ಟಗಳಿಗೆ ಸ್ಪಂದಿಸುವಂತೆ ಗುಣಮಟ್ಟದ ಸೇತುವೆ ಮತ್ತು ರಸ್ತೆಯನ್ನು ನಮ್ಮ ಕರ್ನಾಟಕದ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಮಾಡಿರುವುದು ತಮಗೆ ಸಂತಸ ಉಂಟುಮಾಡಿದೆ. ಈ ಪ್ರಗತಿಗೆ ಸ್ಥಳೀಯ ಜನಪ್ರತಿನಿಧಿ ಏಉಈ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಇರುವ ಜನಪರ ಕಾಳಜಿಯೇ ಕಾರಣ . ಅವರಿಗೆ ತಾವು ಇಲ್ಲಿಯ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಜನನಾಯಕಿಯ ಬಗ್ಗೆ ಶ್ಲಾಘಿಸಿದ್ದಾರೆ.
ಪಾಲಾರ್ ನದಿ ಪಾತ್ರದ ನತ್ತ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಇದೆ. ಇಲ್ಲಿ ರೂಪಾ ಎಂಬುವರು ಶಿಕ್ಷಕಿಯಾಗಿದ್ದಾರೆ. ಈಕೆ ನದಿ ದಾಟುವಾಗ ಪಟ್ಟಕಷ್ಟಗಳು ಅಷ್ಟಿಸ್ಟಿಲ್ಲ.
ಮಳೆಗಾಲದಲ್ಲಂತೂ ನದಿ ದಾಟುವಾಗ ನದಿ ನೀರಿನ ಹರಿವಿನ ರಭಸದಲ್ಲಿ ತಾನು ಓಡಾಟಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನಗಳು ದುರಸ್ತಿ ಮಾಡಲಾಗದ ಸ್ಥಿತಿಗೆ ತಲುಪಿದ್ದವು ಎನ್ನುತ್ತಾರೆ .ಅದಾದ ನಂತರ ಮೂರನೇ ವಾಹನ ಖರೀದಿಸುವಂಥ ಪರಿಸ್ಥಿತಿ ಎದುರಾಗಿತ್ತಂತೆ. ಪ್ರತಿ ಮಳೆಗಾಲದಲ್ಲಿ ತಾನು ತನ್ನ ವಾಹನದ ಜೊತೆಗೆ ನದಿ ದಾಟಲು ಪ್ರವಾಹದ ವಿರುದ್ಧ ಸೆಣಸಾಡಬೇಕಾಗಿತ್ತಂತೆ.
ಇದರಿಂದ ರೋಸಿ ಹೋದ ಈ ರೂಪಾ ಮೇಡಮ್ ಇಲ್ಲಿಯ ಶಾಲೆಯಿಂದಲೆ ಮತ್ತೊಂದಡೆಗೆ ವರ್ಗಾವಣೆ ಬಯಸಿದ್ದರು. ಆದರೆ, ಈಗ ಈ ಶಿಕ್ಷಕಿಯ ಕಷ್ಟಗಳಿಗೆ ಸ್ಪಂದಿಸುವಂತೆ ಲೋಕೋಪಯೋಗಿ ಇಲಾಖೆಯಿಂದ ಈ ನದಿಗೆ ಅಡ್ಡಲಾಗಿ ಗುಣಮಟ್ಟದ ಸೇತುವೆ ಮತ್ತು ರಸ್ತೆ ನಿರ್ಮಿಸಲಾಗಿದೆ. ಇದರಿಂದಾಗಿ ನದಿ ನೀರಿನ ರಭಸದ ತೊಂದರೆ ತಪ್ಪಿದಂತಾಗಿದೆ. ಹಾಗಾಗಿ ತನ್ನ ಓಡಾಟದ ಸಂಪರ್ಕ ಈಗ ಸುಲಭವಾಗಿದೇಯಂತೆ. ಇದು ತನಗೆ ಸಂತಸ ಕೂಡಾ ತಂದಿದೆ ಎಂದು ಹೇಳುವ ಶಿಕ್ಷಕಿ ರೂಪಾ ಅವರು ವರ್ಗಾವಣೆ ಮಾಡಿಸಿಕೊಳ್ಳುವ ವಿಚಾರವೇ ಈಗ ಕೈಬಿಟ್ಟಿದ್ದಾರೆ. ಇದೇ ಶಾಲೆಯಲ್ಲಿ ಮಕ್ಕಳಿಗೆ ತಾನು ಪಾಠಕಲಿಸುತ್ತಾ, ತನ್ನ ಶಿಕ್ಷಕಿ ವೃತ್ತಿ ಜೀವನ ಮುಂದುವರಿಸಲು ನಿರ್ಧರಿಸಿದ್ದಾರೆ.
ಹಿಂದಿನ ದಿನಗಳಲ್ಲಿ ಅಂದ್ರೆ, ೮೦ರ ದಶಕದ ಕಾಲ ಅದು. ನಲ್ಲೂರು ಗ್ರಾಮದ ಸಮೀಪ ಲೋಕೋಪಯೋಗಿ ಇಲಾಖೆಯಿಂದ ಸಣ್ಣದೊಂದು ಸೇತುವೆ ನಿರ್ಮಾಣ ಮಾಡಲಾಗಿತ್ತು. ಆಗ ಪಾಲಾರ್ ನದಿ ನೀರಿನ ಪ್ರವಾಹ ಹೆಚ್ಚಿದಾಗ ಜನಸಾಮಾನ್ಯರು ಬೇತಮಂಗಲ ತಲುಪಲು ಕವರಗಾನಹಳ್ಳಿ ಮಾರ್ಗವಾಗಿ ಹೋಗಬೇಕಾಗಿತ್ತು. ಆದರೆ, ಈ ಕ್ಷೇತ್ರದ ಶಾಸಕಿ ರೂಪಕಲಾ ಅವರ ಜನಪರ ಕಾಳಜಿ ಮತ್ತು ಇಲ್ಲಿಯ ವ್ಯಾಪಾರ ವಹಿವಾಟುಗಳ ಪ್ರಗತಿಯ ಬಗ್ಗೆ ಅವರಿಗಿರುವ ದೂರ ದೃಷ್ಟಿಯಿಂದಾಗಿ ಲೋಕೋಪಯೋಗಿ ಇಲಾಖೆ ಈಗ ಹೊಸ ಸೇತುವೆ ಮತ್ತು ರಸ್ತೆಯನ್ನು ನಿರ್ಮಿಸಿ ಕೊಟ್ಟಿದೆ ಎಂದು ನತ್ತ ಗ್ರಾಮದ ನಿವಾಸಿ ಗಣೇಶ್ ತಿಳಿಸಿದ್ದಾರೆ.
ಮಳೆಗಾಲ ಬಂತೆಂದರೆ ಸಾಕು ಇಲ್ಲಿಯ ವಿದ್ಯಾರ್ಥಿಗಳು, ಜನಸಾಮಾನ್ಯರು ಹಾಗೂ ದ್ವಿಚಕ್ರ ವಾಹನ ಸವಾರರು ನದಿ ದಾಟಲು ಹರಸಾಹಸವೇ ಪಡಬೇಕಾಗಿತ್ತು. ಮಳೆಗಾಲದಲ್ಲಿ ನದಿ ನೀರಿನ ಹರಿವು ಹೆಚ್ಚಾದಾಗ ಹತ್ತಾರು ಹಳ್ಳಿಗಳ ಸಂಪರ್ಕವೇ ಕಡಿದು ಹೋಗುತ್ತಿತ್ತು ಇಲ್ಲಿ. ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲೇ ಈ ಸೇತುವೆಗೆ ಅನುದಾನ ಬಿಡುಗಡೆ ಮಾಡಲು ಕೆ ಜಿ ಎಫ್ ಶಾಸಕಿ ರೂಪಕಲಾ ಶಶಿಧರ್ ಮನವಿ ಮಾಡಿದ್ದರು.
ಆ ಸಂದರ್ಭದಲ್ಲಿ ಅನುದಾನ ದೊರೆತಿರಲಿಲ್ಲ. ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯನ್ನು ಯಾವಾಗ ಸಚಿವರಾದ ಸತೀಶ್ ಜಾರಕಿಹೊಳಿ ಯವರು ವಹಿಸಿಕೊಂಡರೋ ಆನಂತರ ರಾಜ್ಯದಲ್ಲಿ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆ ಆರಂಭವಾಯಿತು.
ಇದರಿಂದಾಗಿ ಪಾಲಾರ್ ನದಿ ಪಾತ್ರದ ಕಳ್ಳಿಕುಪ್ಪ, ನತ್ತ ಹಾಗೂ ಮತ್ತಿತರ ಊರುಗಳ ಗ್ರಾಮಸ್ಥರ ದಶಕಗಳ ಕನಸು ಈಗ ನನಸಾಗಿದೆ. ನಿಗದಿತ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ರಾಜ್ಯದಲ್ಲಿ ಸೇತುವೆಗಳನ್ನು ನಿರ್ಮಾಣಮಾಡಿದೆ ಎಂಬುದಕ್ಕೆ ಈ ಪಾಲಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸಾಕ್ಷಿಯಾಗಿ ನಿಲ್ಲುತ್ತಿದೆ.
ಕೆಜಿಎಫ್ ತಾಲೂಕಿನ ನಲ್ಲೂರು, ನತ್ತ ಗ್ರಾಮಗಳ ಸಮೀಪ ಪಾಲಾರ್ ನದಿಗೆ ಅಡ್ಡಲಾಗಿ ಸುಮಾರು ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಸೇತುವೆ ಮತ್ತು ರಸ್ತೆ ನಿರ್ಮಾಣ ಮಾಡಲಾಗಿದೆ.
ಹಾಲಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ನದಿ ಪಾತ್ರದ ಜನರ ಸಮಸ್ಯೆ ವಿವರಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಸಚಿವರು ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲಾ, ಏಉಈ ಕ್ಷೇತ್ರದಲ್ಲಿ ಅನೇಕ ರಸ್ತೆಗಳ ನಿರ್ಮಾಣಕ್ಕೆ ಕೂಡಾ ಅನುದಾನ ಬಿಡುಗಡೆಯಾಗಿದೆ ಎಂದು ಇದೇವೇಳೆ ಶಾಸಕಿ ರೂಪಕಲಾ ಶಶಿಧರ್ ಸಂತಸ ವ್ಯಕ್ತಪಡಿಸುತ್ತಾರೆ.
ಅದಕ್ಕಾಗಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಿಗೆ ಶಾಸಕಿ ರೂಪಕಲಾ ಶಶಿಧರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಶಾಸಕಿ ರೂಪಕಲಾ ಶಶಿಧರ್ ಅವರ ಸೂಚನೆಯ ಮೇರೆಗೆ ಇಲ್ಲಿಯ ನಲ್ಲೂರು ಗ್ರಾಮದ ಸಮೀಪ ನದಿಗೆ ಅಡ್ಡಲಾಗಿ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿ ಮತ್ತು ನೀಲನಕ್ಷೆ ಸಿದ್ಧಪಡಿಸಲಾಯಿತು.
ಈ ನಕ್ಷೆಯ ವಿನ್ಯಾಸದಂತೆ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿದಿದೆ ಎಂದು ಕೋಲಾರ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಅಭಿಯಂತರರಾದ ಕೆ.ಎಲ್. ರಾಮಮೂರ್ತಿ ತಿಳಿಸಿದ್ದಾರೆ.
ಪಾಲಾರ್ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಸೇತುವೆ ಮತ್ತು ರಸ್ತೆ ನಿರ್ಮಾಣದಿಂದ ನದಿಯ ಸುತ್ತಮುತ್ತಲ ಹಳ್ಳಿಗಳಾದ ಕಳ್ಳಿಕುಪ್ಪ, ನತ್ತ ಸೇರಿದಂತೆ ಇಲ್ಲಿಯ ಬಹುತೇಕ ಎಲ್ಲಾ ಗ್ರಾಮಗಳಿಗೆ ಇನ್ನು ಉತ್ತಮ ಸಂಪರ್ಕದೊರಕಲಿದೆ. ಅಲ್ಲದೆ , ಇಲ್ಲಿಯ ಜನರಿಗೆ ಸುಲಭವಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಕೂಡಾ ಸಂಪರ್ಕ ದೊರಕಲಿದೆ.
ಇಲ್ಲಿಯ ರೈತರು ತಾವು ಬೆಳೆದ ತರಕಾರಿ ಮತ್ತು ಇನ್ನಿತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸುಲಭವಾಗಿ ಸಾಗಿಸಲು ಈಗ ಅನುಕೂಲದ ಮಹಾದ್ವಾರವೇ ತೆರಿದುಕೊಂಡಿದೆ. ಈ ಪಾಲಾರ್ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಹಾಗೂ ರಸ್ತೆಗಳಿಂದಾಗಿ ನಿರಾತಂಕವಾಗಿ ಸರ್ವ ಋತುಗಳಲ್ಲಿ ಸಂಚರಿಸಲು ಜನ ಜಾನುವಾರುಗಳಿಗೆ ಅಕಾಶ ತೆರೆದುಕೊಂಡಿದೆ.
ಈ ಭಾಗದ ಊರುಗಳಲ್ಲಿ ಆರ್ಥಿಕ ಚಟುವಟಿಕೆಗಳು ಕೂಡಾ ಇದೀಗ ಗರಿಗೆದರಿದೆ. ಸೇತುವೆ ಮತ್ತು ರಸ್ತೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೋಳಿ ಬುಧವಾರ ಲೋಕಾರ್ಪಣೆ ಮಾಡಲಿದ್ದಾರೆ.
ಚಿತ್ರ - ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ನಲ್ಲೂರು ಬಳಿ ಪಾಲಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಮತ್ತು ರಸ್ತೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್