ವಿಜಯಪುರ, 07 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಮಾಯಣದ ಮಹಾಕಾವ್ಯದಲ್ಲಿ ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳು ಒಳಗೊಂಡಿದ್ದು ಆ ಜೀವನ ಮೌಲ್ಯಗಳನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ಜಗತ್ತಿಗೆ ನೀಡಿದ್ದಾರ ಎಂದು ಶಾಸಕರಾದ ವಿಠ್ಠಲ ಕಟಕಧೋಂಡ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವಿಜಯಪುರ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮ0ದಿರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಾತನಾಡಿದರು.
ಆದರ್ಶ ವ್ಯಕ್ತಿಯ ಚಿತ್ರಣ, ಕೌಟುಂಬಿಕ, ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯ ಕಾಣಬಹುದಾಗಿದೆ. ಮನುಕುಲದ ಏಳಿಗೆಗಾಗಿ ಅವರು ನೀಡಿದ ಸಂದೇಶ ದಾರಿದೀಪವಾಗಿವೆ. ಮಹರ್ಷಿ ಅವರು ರಾಮಾಯಣದ ಮೂಲಕ ಪ್ರತಿಯೊಬ್ಬರು ಜೀವನದಲ್ಲಿ ಎದುರಿಸುವ ಸಂಗತಿಗಳು ಅಡಕವಾಗಿದ್ದು, ನಿತ್ಯ ಸತ್ಯವಾಗಿರುವ ಜೀವನ ಮೌಲ್ಯಗಳನ್ನು ಹಾಗೂ ಸಂದೇಶಗಳನ್ನು ಮಹಾಕಾವ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಆ ವಿಚಾರಗಳನ್ನು ಪಾಲಿಸೋಣ ವಾಲ್ಮೀಕಿ ಮಹರ್ಷಿ ಅವರ ನೀತಿ ಉಕ್ತಿಗಳು ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಆನಂದ.ಕೆ. ಅವರು ಮಾತನಾಡಿ, ವಾಲ್ಮೀಕಿ ಮಹರ್ಷಿ ಅವರು ರಾಮಾಯಣದ ಕಾವ್ಯದಲ್ಲಿ ಉಲ್ಲೇಖಿಸಿರುವ ಚಿಂತನೆಗಳನ್ನು ತಿಳಿದುಕೊಳ್ಳಬೇಕು. ಅದರಲ್ಲಿನ ಅಂಶಗಳು ಸುಂದರ ಭವಿಷ್ಯಕ್ಕೆ ಭದ್ರ ಅಡಿಪಾಯ ಒದಗಿಸುತ್ತವೆ.ಬದುಕಿನ ಧಾವಂತದಲ್ಲಿ ನಮ್ಮನ್ನು ನಾವು ಅಂತರಾವಲೋಕನ ಮಾಡಿಕೊಂಡು, ಉತ್ತಮ ಬದುಕು ರೂಪಿಸಿಕೊಳ್ಳುವವೆಡೆಗೆ ಸಾಗಬೇಕು. ಮಹಾನ್ ವ್ಯಕ್ತಿಗಳು ನೀಡಿದ ಸಂದೇಶ ಅವರ ಚಿಂತನೆಗಳನ್ನು ಅರಿತುಕೊಂಡು ಸಾರ್ಥಕ ಜೀವನ ಹೊಂದೋಣ. ಇಂತಹ ಜಯಂತಿಗಳ ಮೂಲಕ ಮಹನೀಯರ ಆದರ್ಶ ಮೌಲ್ಯಗಳನ್ನು ಕೇವಲ ಒಂದು ದಿನಕ್ಕೆ ಸ್ಮರಿಸಿಕೊಳ್ಳದೆ ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ರಾಮಾಯಣದಲ್ಲಿ ಅಡಕಗೊಂಡ ವಿಚಾರಗಳನ್ನು ಯುವಜನರಿಗೆ ತಿಳಿಸಿಕೊಡಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ರಾಮಾಯಣದ ಮಹಾಕಾವ್ಯದಲ್ಲಿ ಸಂವಿಧಾನದ ಆಶಯವನ್ನು ಕಾಣಬಹುದಾಗಿದೆ. ಸಮಾನತೆ, ಭ್ರಾತೃತ್ವ, ಒಗ್ಗೂಡಿ ಬಾಳುವಿಕೆಯಂತಹ ಚಿಂತನೆಯನ್ನು ಕಾವ್ಯದಲ್ಲಿ ಚಿತ್ರಿಸಿದ ವಾಲ್ಮೀಕಿಯವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ನೀಗಿ ಉತ್ತಮತೆಯನ್ನು ಅಳವಡಿಸಕೊಳ್ಳಲು ರಾಮಯಾಣದ ಅಂಶಗಳು ತಿಳಿಸಿಕೊಡುತ್ತವೆ. ಪ್ರಕೃತಿಯ ಸೌಂದರ್ಯ ಹಾಗೂ ಆರಾಧನೆಯನ್ನು ವಾಲ್ಮೀಕಿಯವರ ಮಹಾಕಾವ್ಯದಲ್ಲಿ ಕಾಣಬಹುದಾಗಿದೆ. ಕಷ್ಟಗಳನ್ನು ಮೆಟ್ಟಿ ನಿಂತು,ನಕಾರಾತ್ಮಕ ಭಾವನೆಗಳನ್ನು ತೊಡೆದು ಹಾಕಿ, ಆತ್ಮ ವಿಶ್ವಾಸದಿಂದ ಮುನ್ನೆಡೆದು ಉನ್ನತ ಸಾಧನೆಗೆ ಮಹರ್ಷಿ ವಾಲ್ಮೀಕಿ ಚಿಂತನೆಗಳಿ0ದ ಪ್ರೆರಣೆ ಹೊಂದಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕರಾದ ಯಲ್ಲಪ್ಪ ನಾಯಕ ಅವರು ಉಪನ್ಯಾಸ ನೀಡಿ, ರಾಮಾಯಣ ಮಹಾಕಾವ್ಯದಲ್ಲಿರುವ ಪುಷ್ಪಕ ವಿಮಾನ ಇಂದಿನ ಎಂಜಿನಿಯರಿಂಗ್ ಗೆ ಸ್ಪೂರ್ತಿದಾಯಕವಾಗಿದೆ. ತಂದೆಯ ಮಾತಿಗೆ ಮನ್ನಣೆ ನೀಡಿದ ರಾಮನ ಗುಣ, ಸಹೋದರ ಪ್ರೇಮ, ಆದರ್ಶ ವ್ಯಕ್ತಿತ್ವ ಇಂಥಹ ಅನೇಕ ವಿಚಾರಗಳು ವಾಲ್ಮೀಕಿ ಮಹರ್ಷಿ ಅವರು ರಾಮಾಯಣದ ಮೂಲಕ ಮನುಕುಲಕ್ಕೆ ಉತ್ತಮ ಸಂದೇಶ ಹಾಗೂ ಚಿಂತನೆಗಳನ್ನು ನೀಡಿದ್ದಾರೆ. ರಾಮಾಯಣ ಕಾವ್ಯ 24 ಸಾವಿರ ಶ್ಲೋಕಗಳನ್ನು ಒಳಗೊಂಡಿದೆ. ಇದರಲ್ಲಿನ ವಿಚಾರಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದ ಅವರು, ಮಹರ್ಷಿ ವಾಲ್ಮೀಕಿ ಜೀವನ ವೃತ್ತಾಂತ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ರಂಗನಾಥ ಬತ್ತಾಸೆ ಹಾಗೂ ತಂಡದಿAದ ನೃತ್ಯ ರೂಪಕ ನೋಡುಗರ ಕಣ್ಮನ ಸೆಳೆಯಿತು.
ಈ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ, ಗುರುನಾಥ ದಡ್ಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಶಿವಾನಂದ ಮಾಸ್ತಿಹೋಳಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ,ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಹಿಂದುಳಿದ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪುಂಡಲಿಕ ಮಾನವರ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿರಯ್ಯ ಸಾಲಿಮಠ, ಜಿಲ್ಲಾ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅಧ್ಯಕ್ಷಕರಾದ ಎಸ್. ಎಂ.ಪಾಟೀಲ್, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಶ್ರೀಮತಿ ಶೀಲಾ ಬಿರಾದಾರ, ಟಿ.ವಿ.ಮಂಟೂರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಗ ಚಾಲನೆ ದೊರೆತು ಭವ್ಯ ಮೆರವಣಿಗೆಯು ವಿವಿಧ ಕಲಾ ತಂಡಗಳೊ0ದಿ ಗೆ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತದ ಮಾರ್ಗದ ಮೂಲಕ ಸಾಗಿ ಕಂದಗಲ್ ಶ್ರೀ ಹನುಮಂತರಾಯರ ರಂಗಮಂದಿರದಲ್ಲಿ ಸಮಾವೇಶಗೊಂಡಿತ್ತು.
ಹಿಂದೂಸ್ತಾನ್ ಸಮಾಚಾರ್ / jyothi deshpande