ಜೈಪುರ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜಸ್ಥಾನದ ರಾಜಧಾನಿ ಜೈಪುರದ ಸವಾಯಿ ಮಾನ್ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯ ಆಘಾತ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಏಳು ರೋಗಿಗಳು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
ರಾತ್ರಿ 11.20ರ ಸುಮಾರಿಗೆ ನ್ಯೂರೋ ಐಸಿಯು ವಾರ್ಡ್‌ನ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಘಟನೆ ಸಂಭವಿಸಿರುವುದಾಗಿ ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ. ಪೇಪರ್‌ಗಳು ಮತ್ತು ವೈದ್ಯಕೀಯ ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಹೊಗೆ ತುಂಬಿದ ಕಾರಣ ಸಿಬ್ಬಂದಿಗೆ ರಕ್ಷಣಾ ಕಾರ್ಯಾಚರಣೆ ಕಷ್ಟವಾಗಿತ್ತು. ಅಗ್ನಿಶಾಮಕ ದಳವು ಸುಮಾರು ಒಂದೂವರೆ ಗಂಟೆಯ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು.
ಘಟನೆಯಲ್ಲಿ ಮೃತಪಟ್ಟವರು ಪಿಂಟು (ಸಿಕಾರ್), ದಿಲೀಪ್ (ಜೈಪುರ), ಶ್ರೀನಾಥ್, ರುಕ್ಮಣಿ, ಕುಷ್ಮಾ (ಭರತ್‌ಪುರ), ಸರ್ವೇಶ್ (ಆಗ್ರಾ) ಹಾಗೂ ಬಹದ್ದೂರ್ (ಸಂಗನೇರ್) ಎಂದು ಗುರುತಿಸಲಾಗಿದೆ. ಘಟನೆಯ ಸಮಯದಲ್ಲಿ ಐಸಿಯುನಲ್ಲಿ 11 ರೋಗಿಗಳಿದ್ದರು ಎಂದು ಟ್ರಾಮಾ ಸೆಂಟರ್‌ನ ನೋಡಲ್ ಅಧಿಕಾರಿ ಡಾ. ಅನುರಾಗ್ ಧಾಕಡ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಆಸ್ಪತ್ರೆಗೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. “ರಾಜ್ಯ ಸರ್ಕಾರ ಪೀಡಿತ ಕುಟುಂಬಗಳೊಂದಿಗೆ ನಿಂತಿದೆ,” ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಘಟನೆಯನ್ನು “ತೀವ್ರ ದುಃಖಕರ” ಎಂದಿದ್ದು, ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa