ವಿಶ್ವ ರೇಬಿಸ್ ದಿನಾಚರಣೆ ಮತ್ತು ವಿಶ್ವ ಹೃದಯ ದಿನಾಚರಣೆ
ಗದಗ, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಶ್ವ ರೇಬಿಸ್ ದಿನ ಹಾಗೂ ವಿಶ್ವ ಹೃದಯ ದಿನದ ಅಂಗವಾಗಿ ಅಕ್ಟೋಬರ್ 03 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾ ಘಟಕ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ, ತಾಲೂಕ ಆರೋಗ್ಯಾಧಿಕಾರಿಗ
ಪೋಟೋ


ಗದಗ, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಶ್ವ ರೇಬಿಸ್ ದಿನ ಹಾಗೂ ವಿಶ್ವ ಹೃದಯ ದಿನದ ಅಂಗವಾಗಿ ಅಕ್ಟೋಬರ್ 03 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾ ಘಟಕ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ, ಮುಂಡರಗಿ ಹಾಗೂ ಶ್ರೀ ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜ್, ಮುಂಡರಗಿಯ ಇವರ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು.

ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ.ವೆಂಕಟೇಶ ರಾಠೋಡ್ ರವರು ಮಾತನಾಡಿ ರೇಬಿಸ್ ಒಂದು ವೈರಾಣುವಿನಿಂದ ಹರಡುವ ಮಾರಕ ಖಾಯಿಲೆ ಇದ್ದು, ಇದರ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ರೋಗವನ್ನು ಸೋಲಿಸುವಲ್ಲಿ ಪ್ರಗತಿಯನ್ನು ಸಾಧಿಸಲು ಈ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತೆದೆ ಎಂದರು.

ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಲೂಯಿಸ್ ಪಾಶ್ವ್ಯ ಅವರ ಮರಣದ ವಾರ್ಷಿಕೋತ್ಸವವನ್ನು ವಿಶ್ವ ರೇಬಿಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷದಲ್ಲಿ ರೇಬಿಸ್ ತಡೆಗಟ್ಟಲು ಮುಂದಾಗೋಣ ನೀವು ನಾನು ನಮ್ಮ ಸಮಾಜ ಎಂಬ ಘೋಷವಾಕ್ಯದೊಂದಿಗೆ ವಿಶ್ವ ರೇಬಿಸ್ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇದೊಂದು 100% ಮಾರಕ ರೋಗವಾಗಿದ್ದು 100% ಇದನ್ನು ತಡೆಗಟ್ಟಬಹುದಾಗಿದೆ. ವರ್ಷಕ್ಕೆ 20 ಸಾವಿರ ಸಾವುಗಳು ಭಾರತದಲ್ಲಿ ರೇಬಿಸ್‌ನಿಂದ ಆಗುತ್ತಿವೆ. ಕಾರಣ ರೇಬಿಸ್ ಲಸಿಕೆಯ ಬಗ್ಗೆ ಭಯ ಬಿಟ್ಟು ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬಹುದು.

ನಾಯಿ, ಬೆಕ್ಕು ಇತರೇ ಪ್ರಾಣಿಗಳು ಕಚ್ಚಿದಾಗ ನಿರ್ಲಕ್ಷ ಮಾಡದೆ ತಕ್ಷಣವೇ 15 ನಿಮಿಷಗಳವರೆಗೆ ಸಾಬೂನಿಂದ ಮೂಲಕ ಚೆನ್ನಾಗಿ ತೊಳೆದು ನಂತರ ನಂಜು ನಿರೋಧಕ ದ್ರಾವಣ ಲೇಪಿಸಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಹೇಳಿದರು.

ಮುಂದುವರೆದು ಸಾಮಾನ್ಯವಾಗಿ ರೇಬಿಸ್ ಸೋಂಕು ಹೊಂದಿದ ಪ್ರಾಣಿಗಳಲ್ಲಿ ನಾಯಿಗಳಿಂದ 97% ರಷ್ಟು, ಬೆಕ್ಕುಗಳಿಂದ 2% ಹಾಗೂ ಇತರೇ ಪ್ರಾಣಿಗಳಿಂದ 1%ರಷ್ಟು ರೋಗ ಹರಡುವ ಸಾಧ್ಯತೆಯಿದೆ. ಇವುಗಳ ಕಡಿತದಿಂದ, ಪರಚುವಿಕೆಯಿಂದ ತೆರೆದ ಚರ್ಮದ ಮೇಲೆ ನೆಕ್ಕುವಿಕೆಯಿಂದ, ಜೊಲ್ಲಿನ ಸಂಪರ್ಕದಿಂದ ರೋಗ ಹರಡುವ ಸಾಧ್ಯತೆ ಇದ್ದು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆಗಳು ಲಭ್ಯವಿರುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಹಾಲುಣಿಸುವ ತಾಯಂದಿರು 1 ವರ್ಷದೊಳಗಿನ ಮಕ್ಕಳು ಮತ್ತು ವಯಸ್ಕರು ಸಹ ಪ್ರಾಣಿಗಳು ಕಡಿದಾಗ ರೇಬಿಸ್ ವಿರುದ್ಧ ಲಸಿಕೆಯನ್ನು ತಪ್ಪದೇ ತೆಗೆದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು ಹಾಗೂ ಸಾಕು ಪ್ರಾಣಿಗಳಿಗೂ ಕೂಡ ತಪ್ಪದೇ ಪ್ರತಿವರ್ಷ ಲಸಿಕೆ ಹಾಕಿಸಿ ಎಂದು ತಿಳಿಸಲಾಯಿತು.

ಪ್ರಭಾರಿ ಪ್ರಾಂಶುಪಾಲರಾದ ಮಹೇಶ ಬದನಿಕಾಯಿ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಹೃದಯದ ಆರೋಗ್ಯವನ್ನು ಸಧೃಡವಾಗಿಟ್ಟುಕೊಳ್ಳಲು ಪ್ರತಿದಿನ ವ್ಯಾಯಾಮ, ಯೋಗಾಸನ, ಪೌಷ್ಠಿಕ ಆಹಾರ ಹಾಗೂ ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 7 ರಿಂದ 8 ಗಂಟೆಯವರೆಗೆ ಆರೋಗ್ಯಕರ ನಿದ್ರೆ ಅವಶ್ಯಕ ವಾಗಿರುತ್ತದೆಂದು ತಿಳಿಸಿದರು.

ಡಾ.ಲಕ್ಷ್ಮಣ್ ಪೂಜಾರ ತಾಲೂಕ ಆರೋಗ್ಯಾಧಿಕಾರಿಗಳು, ಮುಂಡರಗಿ ರವರು ಮಾತನಾಡಿ ವಿಶ್ವ ಹೃದಯ ದಿನವನ್ನು ಪರಿಣಾಮಕಾರಿಯಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ. ಆಧುನಿಕ ಜೀವನ ಶೈಲಿ, ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಇವೆಲ್ಲವುದರ ಕಾರಣಗಳಿಂದಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯುವ ಜನರೆ ಹೆಚ್ಚಿನ ಸಂಖ್ಯೆಯಲ್ಲಿ ಹಠತ್ತಾಗಿ ಹೃದಯಾಘಾತ, ಹೃದಯ ಸ್ತಂಭನಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ವರ್ಷದ ಘೋಷವಾಕ್ಯ ಹೃದಯ ಬಡಿತವನ್ನು ತಪ್ಪಿಸಿಕೊಳ್ಳಬೇಡಿ ಎಂಬುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಹೃದ್ರೋಗಳಿಗೆ ಉಂಟಾಗುತ್ತಿರುವ ಜೀವ ಹಾನಿ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು

ಉಪನ್ಯಾಸಕರಾದ ಸಂತೋಷ ಕಾಗನೂರ, ಮಂಜುನಾಥ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೂಪಸೇನ್ ಚವ್ಹಾಣ, ಜಿಲ್ಲಾ ಸಮೀಕ್ಷಣಾ ಘಟಕದ ಡಾ.ರವಿ ಕಡಗಾವಿ ಜಿಲ್ಲಾ ಸಂಯೋಜಕರು, ಡಾ.ಪ್ರವೀಣ ನಿಡಗುಂದಿ ಎಪಿಡೆಮಿಯೋಲಾಜಿಸ್ಟ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹಾಗೂ ಪ್ರಾ.ಆ.ಕೇಂದ್ರ ಹಿರೇವಡ್ಡಟ್ಟಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕುಮಾರಿ ಈಶ್ವರಿ ಬಡಿಗೇರ ಪ್ರಾರ್ಥಿಸಿದರು. ಮುಂಡರಗಿ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಎಮ್.ಎಸ್. ಸಜ್ಜನರ ನಿರೂಪಿಸಿದರು ಹಾಗೂ ಎಮ್.ಎಸ್.ರಬ್ಬನಗೌಡ್ರ ರವರು ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande