ಬೆಳಗಾವಿ, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕಕ್ಕೆ ಎರಡನೇ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯಿಂದ ಕರ್ನಾಟಕದ ಜೊತೆಗೆ ಬೆಳಗಾವಿ ಕೂಡ ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿನ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಂದು ಲೋಕಾರ್ಪಣೆಗೊಂಡಿದ್ದು ಈ ಭಾಗದ ಜನರಿಗೆ ಖುಷಿ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಬೆಳಗಾವಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಿರ್ಮಾಣಗೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಬಸ್ ನಿಲ್ದಾಣದ ಉದ್ಘಾಟನೆ ಹಾಗೂ ಚನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಈ ರಾಜ್ಯಕ್ಕೆ, ಬಡವರಿಗೆ, ರೈತರಿಗೆ, ಹಿಂದುಳಿದವರಿಗೆ ಅತೀ ಹೆಚ್ಚು ಜನಪರ ಯೋಜನೆಗಳನ್ನು ಜಾರಿಗೆ ತಂದವರೆಂದರೆ ಅದು ಸಿದ್ದರಾಮಯ್ಯನವರು. ಈ ಹಿಂದೆ 2013ರಿಂದ 2018ರ ವರೆಗೆ ಅವರ ಆಡಳಿತ ವೈಖರಿಯನ್ನು ನಾವು- ನೀವೆಲ್ಲ ಕಂಡಿದ್ದೇವೆ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ನಮ್ಮ ಕಣ್ಮುಂದಿದೆ. ಈ ಅವಧಿಯಲ್ಲಿ ಘೋಷಣೆ ಮಾಡಲಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಕಾಳಜಿಯಿಂದಾಗಿ ಇಂದು ಜಿಲ್ಲಾ ಕೇಂದ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ನಿರ್ಮಾಣವಾಗುತ್ತಿವೆ. ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಬಡವರಿಗೆ ಅನುಕೂಲ ಆಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸೆ ಸಿಗಲಿದೆ ಎಂಬುದನ್ನು ಬಿಮ್ಸ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸಾಬೀತು ಮಾಡಿ ತೋರಿಸಬೇಕು ಎಂದು ಸಚಿವರು ಕರೆ ನೀಡಿದರು.
ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಮ್ಸ್ ಆಸ್ಪತ್ರೆಯಲ್ಲಿ ಅತಿಹೆಚ್ಚು ಬಾಣಂತಿಯರ ಸಾವು ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿತ್ತು. ಇದಕ್ಕೂ ಮೊದಲು ಬಿಮ್ಸ್‌ನಲ್ಲಿ ಹೆಚ್ಚು ಬಾಣಂತಿಯರ ಸಾವು ಸಂಭವಿಸಿದ್ದವು. ಇತ್ತೀಚೆಗೆ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಕೂಡ ಕಡಿಮೆ ಆಗುತ್ತಿವೆ ಎಂದರು.
ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಈ ಅತ್ಯಾಧುನಿಕ ಆಸ್ಪತ್ರೆಗೆ ನಮ್ಮ ಸರ್ಕಾರ ತಜ್ಞ ವೈದ್ಯರ ನೇಮಕ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಸಾರ್ವಜನಿಕರು ಇದರ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆ ಎಂಬ ಕೀಳರಿಮೆಯಿಂದ ಎಲ್ಲರೂ ಹೊರಬರಬೇಕು. ಈ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ನಾವು ಮಾಡುತ್ತಿರುವ ಪ್ರಗತಿಗೆ ಸಾಕ್ಷಿಯಾಗಿದೆ. ಇದು ನಿಸ್ಸಂದೇಹವಾಗಿ ಈ ಪ್ರದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಆರೈಕೆಯ ಕೇಂದ್ರವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಜನರ ತೆರಿಗೆ ಹಣದಿಂದ ನಿರ್ಮಾಣಗೊಂಡಿರುವ ನಗರ ಬಸ್ ನಿಲ್ದಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣವನ್ನು ಸ್ವಚ್ಛತೆಯನ್ನು ಎಲ್ಲರೂ ಕಾಪಾಡಿಕೊಳ್ಳಬೇಕು ಎಂದರು.
ನೀರಾವರಿ ಯೋಜನೆ ಮಾಡುವ ಯೋಜನೆ ಇತ್ತು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಮ್ಮ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ನಿರ್ಮಾಣವಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಆ ಕ್ಯಾಂಪಸ್ ಆಯ್ಕೆ ಮಾಡಿದ್ದಾರಾದರೂ, ವಿಶ್ವವಿದ್ಯಾಲಯವನ್ನು ಒಂದು ಮಾದರಿಯಾಗಿ ಅಭಿವೃದ್ಧಿಪಡಿಸಲು ನಾನು ಪ್ರಯತ್ನಿಸುತ್ತೇನೆ. ಅಲ್ಲಿ ನನಗೆ ನೀರಾವರಿ ಯೋಜನೆ ತರುವ ಕನಸಿತ್ತು. ಆದರೆ, ಅಭಿವೃದ್ಧಿಯಲ್ಲಿ ರಾಜಕೀಯ ಮಾಡಲು ನನಗೆ ಬರುವುದಿಲ್ಲ. ಅದರಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ತರುವುದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದರು.
ವಿಶ್ವವಿದ್ಯಾಲಯಕ್ಕೆ ಆಗಬೇಕಾದ ಎಲ್ಲ ಕೆಲಸಗಳನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದಷ್ಟು ಬೇಗ ವಿಶ್ವವಿದ್ಯಾಲಯ ಉದ್ಘಾಟನೆಯಾಗುವ ದಿಸೆಯಲ್ಲಿ ಪ್ರಯತ್ನಿಸಲಾಗುವುದು. ಮುಖ್ಯಮಂತ್ರಿಗಳಿಂದಲೇ ನೂತನ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa